ಕೀಳಂಜೆ: ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಮಂಗಳವಾರ ಬೆಳಿಗ್ಗೆ ನಾಗ ಮತ್ತು ಪರಿವಾರ ದೇವರುಗಳ ದೃಢ ಸಂಪ್ರೋಕ್ಷಣ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು.
ವೇದಮೂರ್ತಿ ಪುತ್ತೂರು ಶ್ರೀನಿವಾಸ ತಂತ್ರಿ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಗದೇವರಿಗೆ ತನುತಂಬಿಲ, ಪಂಚಾಮೃತ ಅಭಿಷೇಕ ಹಾಗೂ ಕ್ಷೇತ್ರದ ದೇವತೆಗಳಾದ ರಕ್ತೇಶ್ವರಿ ಮತ್ತು ಬೊಬ್ಬರ್ಯ ದೇವತೆಗಳಿಗೆ ಪನಿವಾರ ಸೇವೆ ಸೇವಾರ್ಥಿಗಳಿಂದ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ವತಿಯಿಂದ ದೇವರಿಗೆ ಕಲಶಾಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆದವು.
ಕಾರ್ಯಕ್ರಮದಲ್ಲಿ ಮೂಲ ನಾಗಸಾನಿಧ್ಯ ಕುಟುಂಬದವರು ಹಾಗೂ ಊರ-ಪರಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಈ ವೇಳೆ ಶ್ರೀ ನಾಗದೇವರು ಸಂತುಷ್ಟರಾಗಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸಿ, ಎಲ್ಲರಿಗೂ ಆಯುರಾರೋಗ್ಯ ಹಾಗೂ ಐಶ್ವರ್ಯವನ್ನು ಕರುಣಿಸಲಿ ಎಂದು ತಂತ್ರಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪೂಜಾ ಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ದೇವರ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ತಂತ್ರಿಗಳು, ಅರ್ಚಕ ವೃಂದ, ಧಾರ್ಮಿಕ ಸಲಹೆಗಾರರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಕೋಶಾಧಿಕಾರಿ, ಮಹಿಳಾ ಪದಾಧಿಕಾರಿಗಳು, ದೇವಸ್ಥಾನ ಸಮಿತಿಯ ಎಂಜಿನಿಯರ್, ನಾಗಸಾನಿಧ್ಯ ಭಕ್ತರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

