ಹೆಬ್ರಿ : ಯುವಜನರಲ್ಲಿ ದೇಶಭಕ್ತಿ, ಶಿಸ್ತು ಹಾಗೂ ರಾಷ್ಟ್ರಸೇವೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಅಮೃತಭಾರತಿ ಪದವಿಪೂರ್ವ ಕಾಲೇಜು, ಹೆಬ್ರಿ ಹಾಗೂ ರಾಷ್ಟ್ರೀಯ ಪದವಿಪೂರ್ವ ಸಂಘ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ “ಭಾರತೀಯ ಸೇನೆಯಲ್ಲಿನ ವೃತ್ತಿ ಅವಕಾಶಗಳು” ಕುರಿತ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಗಾರವು ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬಿಜೆಪಿ ಪ್ರಕೋಷ್ಠಗಳ ಉಡುಪಿ ಜಿಲ್ಲಾ ಸಂಯೋಜಕ ವಿಜಯ ಕೊಡವೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಕರು ದೇಶಸೇವೆಯ ಮನೋಭಾವ ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಸೇನಾ ನೇಮಕಾತಿ ಕಚೇರಿಯ ನೇಮಕಾತಿ ವೈದ್ಯಾಧಿಕಾರಿ ಮೇಜರ್ ಅಭಿಜಿತ್ ಸಿಂಗ್ ಭಾಗವಹಿಸಿ, ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆಯಲ್ಲಿ ಇರುವ ವಿವಿಧ ವೃತ್ತಿ ಅವಕಾಶಗಳು, ನೇಮಕಾತಿ ಪ್ರಕ್ರಿಯೆ, ಅರ್ಹತೆಗಳು ಹಾಗೂ ಆಯ್ಕೆ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.
“ಗೌರವದಿಂದ ಸೇವೆ ಮಾಡಿ, ಧೈರ್ಯದಿಂದ ಮುನ್ನಡೆಸಿ – Serve with Honour, Lead with Courage” ಎಂಬ ಸಂದೇಶದೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ಧರಿಸುವುದು ಕೇವಲ ಉದ್ಯೋಗವಲ್ಲ, ಅದು ದೇಶದ 140 ಕೋಟಿ ಜನರ ನಂಬಿಕೆಯನ್ನು ಹೊರುವ ಜವಾಬ್ದಾರಿ ಎಂದು ಹೇಳಿದರು. ದೈಹಿಕ ಸದೃಢತೆ, ಮಾನಸಿಕ ಶಿಸ್ತು ಹಾಗೂ ದೇಶಭಕ್ತಿ ಸೇನಾ ಸೇವೆಯ ಮೂಲಭೂತ ಅಂಶಗಳಾಗಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ದಾಖಲೆಗಳ ಸಿದ್ಧತೆಗೂ ಹೆಚ್ಚಿನ ಮಹತ್ವವಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಮೇಜರ್ ಅಭಿಜಿತ್ ಸಿಂಗ್ ತೃಪ್ತಿಕರ ಉತ್ತರ ನೀಡಿದರು. ಬಳಿಕ ಅಮೃತಭಾರತಿ ಟ್ರಸ್ಟ್ ವತಿಯಿಂದ ಮೇಜರ್ ಅಭಿಜಿತ್ ಸಿಂಗ್ ಹಾಗೂ ಹವಾಲ್ದಾರ್ ಧರ್ಮವೀರ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕವನ್ನು ಬಿಜೆಪಿ ಉಡುಪಿ ಜಿಲ್ಲಾ ಶಿಕ್ಷಣ ಪ್ರಕೋಷ್ಠದ ಸಂಚಾಲಕ ಮಿಥೇಶ್ ಕುಮಾರ್ ಮೂಡುಕೋಣಾಜೆ ನೆರವೇರಿಸಿ, ದೇಶಸೇವೆಯ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಈ ಕಾರ್ಯಗಾರ ದಾರಿದೀಪವಾಗಲಿದೆ ಎಂದು ಹೇಳಿದರು.
ಈ ಕಾರ್ಯಗಾರದ ಬಳಿಕ ಕಾಲೇಜಿನ ಹಲವು ವಿದ್ಯಾರ್ಥಿಗಳು NDA ಹಾಗೂ ಅಗ್ನಿವೀರ್ ಯೋಜನೆಯಡಿ ಭಾರತೀಯ ಸೇನೆಗೆ ಅರ್ಜಿ ಸಲ್ಲಿಸುವ ಆಸಕ್ತಿ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತಭಾರತಿ ಟ್ರಸ್ಟಿ ಎಚ್. ಬಾಲಕೃಷ್ಣ ಮಲ್ಯ ವಹಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಇಂತಹ ವೃತ್ತಿಮುಖಿ ಕಾರ್ಯಕ್ರಮಗಳನ್ನು ಮುಂದೆಯೂ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಅಮೃತಭಾರತಿ ಟ್ರಸ್ಟ್ ಅಧ್ಯಕ್ಷ ಸಿ.ಎ. ಎಂ. ರವಿ ರಾವ್, ಕಾರ್ಯದರ್ಶಿ ಎಚ್. ಗುರುದಾಸ್ ಶೆಣೈ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಚ್. ರಾಜೇಶ್ ನಾಯಕ್ ಹಾಗೂ ಪ್ರಾಂಶುಪಾಲ ಪ್ರಕಾಶ್ ಜೋಗಿ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ವೀಣೇಶ್ ಅಮೀನ್ ಸ್ವಾಗತಿಸಿದರು. ಉಪನ್ಯಾಸಕ ಚಂದ್ರಹಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿನಿ ಲಕ್ಷ್ಮಿ ಹೆಗಡೆ ಪ್ರಾರ್ಥನಾ ಗೀತೆ ಹಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಮಾಪ್ತಿಯಾಯಿತು.

