ಮೂರು ದಿನದಲ್ಲಿ ಕಂಪೌಂಡ್ ತೆರವುಗೊಳಿಸದಿದ್ದಲ್ಲಿ ನಾವೇ ಕೆಡವುತ್ತೇವೆ – ಹೋರಾಟದ ಎಚ್ಚರಿಕೆ..!

0
3

ಕಾರ್ಕಳ : ಕುಂಟಲ್ಪಾಡಿ ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಆಸುಪಾಸಿನಲ್ಲಿ ಜಾಗ ಖರೀದಿಸಿ ಯಾವುದೇ ಇಲಾಖೆಯಿಂದ ಕಾನೂನಾತ್ಮಕವಾಗಿ ಪೂರ್ವಾನುಮತಿ ಪಡೆಯದೆ ಅವೈಜ್ಞಾನಿಕವಾಗಿ ಲೇಔಟ್, ಕಾಂಪೌಂಡ್ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಜೂ. 4ರಂದು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ದೇವಸ್ಥಾನದ ಆಡಳಿತ ಸಮಿತಿ, ಭಕ್ತಾಧಿಗಳು ದೇವಸ್ಥಾನದ ಸುತ್ತ ನಿರ್ಮಿಸಿರುವ ಕಾಂಪೌಂಡ್ ಕೆಡವಿ ಯಥಾ ಸ್ಥಿತಿಗೆ ತಂದು ಭಕ್ತಾದಿಗಳಿಗೆ ಅಡಚಣೆ ಆಗದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್ ಮತ್ತು ಪುರಸಭಾ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಸುಮಾರು 350 ವರ್ಷಗಳಿಂದ ಕುಂಟಲ್ಪಾಡಿಯಲ್ಲಿ (ಬೈಲಡ್ಕ) ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನವು ಆರಾಧಿಸಲ್ಪಡುತ್ತಿದ್ದು, ಸ್ಥಳೀಯರು, ಭಕ್ತಾದಿಗಳು ಪ್ರತಿ ತಿಂಗಳು ಪೂಜೆ ವಾರ್ಷಿಕವಾಗಿ ಜಾತ್ರೆ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಆದರೆ ರಿಯಲ್ ಎಸ್ಟೇಟ್ ದಂಧೆ ಮಾಡುವವರು ದೇವಸ್ಥಾನದ ಆಸುಪಾಸಿನ ಜಾಗ ಖರೀದಿಸಿ ಯಾವುದೇ ಇಲಾಖೆಯಿಂದ ಕಾನೂನಾತ್ಮಕವಾಗಿ ಪೂರ್ವಾನುಮತಿ ಪಡೆಯದೆ ಕಂದಾಯ ಇಲಾಖೆ ಹಾಗೂ ಪುರಸಭೆಯ ಕೆಲವೊಂದು ಅಧಿಕಾರಿಗಳ ಸಂಚಿನೊಂದಿಗೆ ಅವೈಜ್ಞಾನಿಕವಾಗಿ ಲೇಔಟ್, ಕಂಪೌಂಡ್ ನಿರ್ಮಿಸಿದ್ದಾರೆ. ಇನ್ನು ಪುರಸಭೆ ಟೆಂಡರ್ ಕರೆದು ಸುಮಾರು ಮೂರು ಸಲ ಡಾಂಬರೀಕರಣ ಮಾಡಿಸಿ ಅಭಿವೃದ್ಧಿಗೊಳಿಸಿದ ಸರಕಾರಿ ಮಾನ್ಯ ರಸ್ತೆಯು ಅಂಬಾಭವಾನಿ ದೇವಸ್ಥಾನಕ್ಕೆ ಹಾಗೂ ಅಲ್ಲಿನ ನಾಗರಿಕರಿಗೆ ಮೀಸಲಿದ್ದರೂ ಆ ರಸ್ತೆಯನ್ನು ಜೆಸಿಬಿಯಿಂದ ಕೆಡವಿ ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು ಈ ಬಗ್ಗೆ ತಾಲೂಕು ಆಡಳಿತ ಹಾಗೂ ಪುರಸಭೆಗೆ ಈ ಮೊದಲು ಅನೇಕ ಬಾರಿ ತಿಳಿಸಿದರೂ ಸಮಸ್ಯೆ ಪರಿಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನದಲ್ಲಿ ಜಾತ್ರೆ ಅಥವಾ ಪೂಜೆಗಳು ನಡೆಯುವಾಗ ಸೇರುವ ಸಾವಿರಾರು ಭಕ್ತಾದಿಗಳಿಗೆ ನಡೆದಾಡುವ ಜಾಗ ಇದಾಗಿದ್ದು, ಯಾವುದೇ ಅವಘಡ ಇಲ್ಲವೇ ನೂಕುನುಗ್ಗಲು, ವಿದ್ಯುತ್ ಇಲ್ಲವೇ ಬೆಂಕಿಯಿಂದಾಗಿ ದುರಂತ ಸಂಭವಿಸಿದರೆ ಆಪತ್ಕಾಲದಲ್ಲಿ ಅಗ್ನಿಶಾಮಕ ದಳದವರಿಗೂ ಬರಲು ರಸ್ತೆಯಾಗಲೀ ಯಾವುದೇ ಜಾಗವಾಗಲಿ ಇಲ್ಲ ಎಂದಿರುವ ಭಕ್ತಾದಿಗಳು ಇದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದ್ದಾರೆ. ಪರ್ಪಲೆ ಗುಡ್ಡ ಅಗೆದು ಸಾವಿರಾರು ಲೋಡ್ ಮಣ್ಣು ಸಾಗಿಸಿ, ನೀರು ಹರಿಯುವ ಎರಡು ರಾಜಾ ಕಾಲುವೆಗಳನ್ನು ಮುಚ್ಚಿರುವ ಈ ಭೂ ಮಾಫಿಯಾಗಳ ಬಗ್ಗೆ ಅಂದಿನ ಜಿಲ್ಲಾಧಿಕಾರಿಯವರು ಮಳೆಗಾಲದಲ್ಲಿ ನೆರೆ ನೀರು ಉಕ್ಕಿ ಸುತ್ತಲು ಮುಳುಗಿದಾಗ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಯಾವುದೇ ಕೆಲಸ ಕಾರ್ಯ ಸರಕಾರಿ ಇಲಾಖೆಯಿಂದ ಈವರೆಗೆ ಆಗಿಲ್ಲ ಎಂದು ಆರೋಪಿಸಿದ್ದಾರೆ.

ಆಗ್ರಹಗಳು

1.ದೇವಸ್ಥಾನದ ಸುತ್ತ ನಿರ್ಮಿಸಿರುವ ಕಾಂಪೌಂಡ್ ಕೆಡವಿ ಯಥಾ ಸ್ಥಿತಿಗೆ ತಂದು ಭಕ್ತಾದಿಗಳಿಗೆ ಯಾವುದೇ ಅಡಚಣೆ, ಅವಘಡ ಆಗದಂತೆ ಕ್ರಮ ಕೈಗೊಳ್ಳುವುದು.

2.ಪುರಸಭೆ ಸುಮಾರು 25 ವರ್ಷಗಳಿಂದ ಅಭಿವೃದ್ಧಿಗೊಳಿಸಿರುವ ರಸ್ತೆಯನ್ನು ಭೂ ದಂಧೆಗಿಳಿದ ವ್ಯಕ್ತಿಗಳು ಒತ್ತುವರಿ ಮಾಡಿರುತ್ತಾರೆ. ಆ ರಸ್ತೆಯನ್ನು ಪುನ‌ರ್ ನಿರ್ಮಿಸಿ ಯಥಾ ಸ್ಥಿತಿಗೆ ತಂದು ಅಂಬಾಭವಾನಿ ದೇವಸ್ಥಾನಕ್ಕೆ ಸಂಪರ್ಕಿಸುವಂತೆ ಮಾಡುವುದು.

3.ಎರಡು ರಾಜಾ ಕಾಲುವೆಗಳನ್ನು ಪುನಃ ನಿರ್ಮಿಸಿ ಮಳೆಗಾಲದಲ್ಲಿ ನೆರೆ ಉಕ್ಕದಂತೆ ಸಾರ್ವಜನಿಕರ ಅಹವಾಲನ್ನು ಕಾರ್ಯಗತಗೊಳಿಸುವುದು.

4.ದೇವಸ್ಥಾನದ ಸುತ್ತಮುತ್ತ ಇದ್ದ ಸಾವಿರಾರು ಮರಗಳನ್ನು ಕಡಿದು ಪರಿಸರ ನಾಶಗೊಳಿಸಿರುವ ಬಗ್ಗೆಯೂ ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವುದು.
ಉಗ್ರ ಪ್ರತಿಭಟನೆಯ ಎಚ್ಚರಿಕೆ

ಪ್ರತಿಭಟನೆಯಲ್ಲಿ ಗಂಗಾಧರ್ ಪಣಿಯೂರು, ಸುನಿಲ್ ಕೋಟ್ಯಾನ್, ಅಮರ್ ಶೆಟ್ಟಿಗಾರ್, ಹಿಂದೂ ಮುಖಂಡ ರತ್ನಾಕರ್ ಅಮೀನ್, ಪುರಸಭಾ ಮಾಜಿ ಸದಸ್ಯರಾದ ಮೀನಾಕ್ಷಿ, ಪ್ರಕಾಶ್ ರಾವ್, ಗೋವಿಂದ ರಾವ್ ಮಾತನಾಡಿ ಸಂಬಂಧಪಟ್ಟ ಇಲಾಖೆ ಮೂರು ದಿನದಲ್ಲಿ ಕಂಪೌಂಡ್‌ ತೆರವುಗೊಳಿಸದಿದ್ದಲ್ಲಿ ನಾವೇ ಕೆಡವುತ್ತೇವೆ ಅಲ್ಲದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಚ್ಚರಿಸಿದರು.

ಪರಿಶೀಲಿಸಿ ಕಾನೂನಾತ್ಮಕ ಕ್ರಮ

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಪ್ರದೀಪ್ ಆರ್. ಹಾಗೂ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಈ ಬಗ್ಗೆ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ದೇವಸ್ಥಾನದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿಗಾರ್, ಆಡಳಿತ ಮೊಕೇಸರರಾದ ಶಂಕರ್ ದೇವಾಡಿಗ, ರಾಜೇಶ್ ಕೋಟ್ಯಾನ್, ಅವಿನಾಶ್ ಶೆಟ್ಟಿ, ಸೇವಾ ಸಮಿತಿಯ ಅಮರ್ ಶೆಟ್ಟಿಗಾರ್, ಸತೀಶ್ ಸುವರ್ಣ, ಶೈಲೇಶ್, ಗಣೇಶ್, ಸತೀಶ್, ಉಮೇಶ್ ಸೂಡ, ರಮೇಶ್ ಕಲ್ಲೊಟ್ಟೆ, ಆರ್ಯನ್, ಸ್ವಯಂ, ಆಶಾ ಕೋಟ್ಯಾನ್, ಪ್ರತಿಭಾ, ಪ್ರೀತಿ, ನೇತ್ರ ಸೇರಿದಂತೆ ಸ್ಥಳೀಯರು, ಭಕ್ತಾಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here