ಕುಸಿಯುವ ಭೀತಿಯಲ್ಲಿ ಕೊಳಲಗಿರಿ ಬಸ್ ನಿಲ್ದಾಣ: ಕೂಡಲೇ ದುರಸ್ತಿ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹ

0
5

ಹಾವಂಜೆ : ಹಾವಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಲಗಿರಿಯ ಅಂಗನವಾಡಿ ಕೇಂದ್ರದ ಎದುರು, ಬ್ಯಾಂಕ್ ಆಫ್ ಬರೋಡ ಹಾಗೂ ಹಿಂದಿನ ವಿಜಯ ಬ್ಯಾಂಕ್ ಸಮೀಪದಲ್ಲಿರುವ ಬಸ್ ನಿಲ್ದಾಣವು ಶಿಥಿಲಾವಸ್ಥೆಗೆ ತಲುಪಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಈ ಬಸ್ ನಿಲ್ದಾಣವನ್ನು ಈ ಹಿಂದೆ ವಿಜಯ ಬ್ಯಾಂಕ್ ವತಿಯಿಂದ ನಿರ್ಮಿಸಲಾಗಿತ್ತು. ಆದರೆ ಪ್ರಸ್ತುತ ಬಸ್ ನಿಲ್ದಾಣದ ನಾಲ್ಕು ಕಂಬಗಳಲ್ಲೂ ದೊಡ್ಡ ಪ್ರಮಾಣದ ಬಿರುಕುಗಳು ಕಾಣಿಸಿಕೊಂಡಿದ್ದು, ಮೇಲ್ಚಾವಣಿಯ ಶೀಟ್‌ಗಳು ಸಹ ಹಾಳಾಗಿವೆ. ಇದರಿಂದ ಯಾವುದೇ ಕ್ಷಣದಲ್ಲಿ ಬಸ್ ನಿಲ್ದಾಣ ಕುಸಿಯುವ ಅಪಾಯ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರತಿನಿತ್ಯ ವಿದ್ಯಾರ್ಥಿಗಳು, ರೈತರು, ಮಹಿಳೆಯರು ಹಾಗೂ ಸಾರ್ವಜನಿಕರು ಬಸ್‌ಗಾಗಿ ಇಲ್ಲಿ ಕಾಯುತ್ತಿದ್ದು, ಶಿಥಿಲಗೊಂಡಿರುವ ಬಸ್ ನಿಲ್ದಾಣದ ಒಳಗೆ ಕುಳಿತುಕೊಳ್ಳಲು ಭಯಪಡುವಂತಾಗಿದೆ. ವಿಶೇಷವಾಗಿ ಮಳೆ ಹಾಗೂ ಗಾಳಿ ಬೀಸುವ ಸಂದರ್ಭದಲ್ಲಿ ಕಂಬಗಳು ಮತ್ತು ಮೇಲ್ಚಾವಣಿ ಕುಸಿದು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಇದರ ಹಿಂಭಾಗದಲ್ಲೇ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಬಸ್ ನಿಲ್ದಾಣ ಕುಸಿದರೆ ಅಂಗನವಾಡಿ ಕಟ್ಟಡಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.

ಬಸ್ ನಿಲ್ದಾಣದ ಹಳೆಯ ಕಂಬಗಳು ಹಾಗೂ ಮೇಲ್ಚಾವಣಿಯನ್ನು ತೆರವುಗೊಳಿಸಿ, ಹೊಸದಾಗಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಸಾರ್ವಜನಿಕರು ಹಾಗೂ ಪ್ರಯಾಣಿಕರ ಪರವಾಗಿ ಆಗ್ರಹಿಸಿದ್ದಾರೆ.

ಯಾವುದೇ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here