ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಾರ್ಥಕಮ್ -2026’ ಬೀಳ್ಕೊಡುಗೆ ಸಮಾರಂಭ

0
35

ಮಂಗಳೂರು : ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ 2023–26ನೇ ವರ್ಷದ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗಾಗಿ ‘ಸಾರ್ಥಕಮ್’ -2026 ಬೀಳ್ಕೊಡುಗೆ ಸಮಾರಂಭವು ಬುಧವಾರ, ಜೂನ್ 03, 2026 ರಂದು ಮಧ್ಯಾಹ್ನ 2.00 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಲ್ಲಿ ಭವ್ಯವಾಗಿ ನಡೆಯಿತು. ಹೊರಹೋಗುತ್ತಿರುವ ವಿದ್ಯಾರ್ಥಿಗಳಿಗೆ ಹೃದಯಪೂರ್ವಕ ವಿದಾಯವನ್ನು ತಿಳಿಸಿ, ಅವರ ಶೈಕ್ಷಣಿಕ ಪಯಣ ಹಾಗೂ ಸಾಧನೆಗಳನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಗಿ ಹೊರಹೋಗುವ ವಿದ್ಯಾರ್ಥಿಗಳ ಛಾಯಾಚಿತ್ರದ “ಸ್ಮೃತಿ ಅನಾವರಣ” ಮಾಡುವ ಮೂಲಕ ಎಸ್ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರವೇಶಾಧಿಕಾರಿ ಶ್ರೀಯುತ ಯಶ್ವಿನ್ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ಎಸ್ ಸಿ ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಯು.ಕೆ ಖಾಲಿದ್ ಬೀಳ್ಕೂಡುಗೆ ಸ್ಮರಣಿಕೆ “ಸ್ಮೃತಿ-ಚಿಹ್ನ” ಬಿಡುಗಡೆ ಮಾಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಅಮೂಲ್ಯ ಹಂತವಾಗಿದೆ. ಇಲ್ಲಿ ಪಡೆದ ಶಿಸ್ತು, ನೈತಿಕತೆ ಮತ್ತು ಜ್ಞಾನವೇ ನಿಮ್ಮ ಭವಿಷ್ಯದ ಬಲ ಮತ್ತು ಆಧಾರವಾಗುತ್ತದೆ. ನೀವು ಯಾವುದೇ ಕ್ಷೇತ್ರಕ್ಕೆ ತೆರಳಿದರೂ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸತ್ಯನಿಷ್ಠೆಯನ್ನು ಕಾಪಾಡಿಕೊಳ್ಳಬೇಕು. ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಸಾಧನೆಯ ಮೂಲಕ ಸಂಸ್ಥೆಗೆ ಗೌರವ ತರಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಯಶಸ್ಸು ಮತ್ತು ಸುಖಕರ ಜೀವನಕ್ಕಾಗಿ ಶುಭ ಹಾರೈಸಿದರು. ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾನ್ ಅವರು ಬೀಳ್ಕೊಡುಗೆ ಸಂದೇಶ ನೀಡಿ, ವಿದ್ಯಾರ್ಥಿಗಳು ಜೀವನದ ಮುಂದಿನ ಹಂತವನ್ನು ಆತ್ಮವಿಶ್ವಾಸ ಹಾಗೂ ದೃಢನಿಶ್ಚಯದೊಂದಿಗೆ ಎದುರಿಸಬೇಕು ಎಂದು ಪ್ರೇರೇಪಿಸಿದರು.
.
ಎಲ್ಲಾ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಂದೇಶಗಳನ್ನು ನೀಡಿದರು. ಬಿ ಎಸ್ಸಿ ವಿಭಾಗದ ಮುಖ್ಯಸ್ಥೆ ರೂಪಾ ರಾವ್ ಕೆ, ಬಿಸಿಎ ವಿಭಾಗದ ಮುಖ್ಯಸ್ಥೆ ನಿಮಿ ಸಿ. ಕೆ, ಬಿ.ಕಾಂ ವಿಭಾಗದ ಮುಖ್ಯಸ್ಥೆ ಶ್ರೀಮತಿ ವನಿತಾ ಎಂ. ಹಾಗೂ ಬಿ.ಬಿ.ಎ ವಿಭಾಗದ ಮುಖ್ಯಸ್ಥರು ತಿಲಕ್ ಗೌಡ ಎಲ್ಲಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಾಧನೆ ಹಾಗೂ ನೈತಿಕ ಮೌಲ್ಯಗಳ ಮಹತ್ವವನ್ನು ಒತ್ತಿಹೇಳಿದರು. ಕಿರಿಯ ವಿದ್ಯಾರ್ಥಿಗಳ ಪರವಾಗಿ ಕುಮಾರಿ ರೀಶಲ್ ಡಿ’ಸೋಜಾ ದ್ವಿತೀಯ ಬಿಸಿಎ ಅವರು ಪ್ರತಿಕ್ರಿಯೆ ಭಾಷಣ ನೀಡಿ, ಹಿರಿಯ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿ ಅವರ ಭವಿಷ್ಯ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಬಿ ಎಸ್ಸಿ ಫ್ಯಾಶನ್ ಡಿಸೈನಿಂಗ್ ವಿಭಾಗದ ಮುಖ್ಯಸ್ಥೆ ಅಶ್ವಿನಿ ಎಸ್ ಉಪಸ್ಥಿತರಿದ್ದರು.

ಕಾಲೇಜಿನಿಂದ ಹೊರ ಹೋಗುತ್ತಿರುವ ತರಗತಿ ಪ್ರತಿನಿಧಿ ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದ ಅನುಭವ, ನೆನಪು ಹಾಗೂ ಸ್ನೇಹಬಂಧಗಳನ್ನು ಬಿಬಿಎ ವಿಭಾಗದ ವಿದ್ಯಾರ್ಥಿನಿ ಕುಮಾರಿ ನೈರುಥ್ಯ ಎಸ್, ಬಿಸಿಎ ವಿಭಾಗದ ವಿದ್ಯಾರ್ಥಿನಿ ಕುಮಾರಿ ಗೌತಮಿ ಎಸ್ ಕುಲಾಲ್, ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ಟಿ. ಪಿ. ಹಾಗೂ ಬಿ.ಎಸ್ಸಿ ವಿಭಾಗದ ವಿದ್ಯಾರ್ಥಿ ಸುಹಾನ್ ಅನುಭವವನ್ನು ಹಂಚಿಕೊಂಡರು.

ಅವರ ಮಾತುಗಳು ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳನ್ನು ಮನಮಿಡಿಯುವಂತೆ ಪ್ರತಿಬಿಂಬಿಸಿದವು. ಬಿ.ಎಸ್ಸಿ ಫುಡ್ ಅಂಡ್ ನ್ಯೂಟ್ರಿಷನ್ ವಿಭಾಗದ ವಿದ್ಯಾರ್ಥಿನಿ ಕುಮಾರಿ ಶ್ರವ್ಯಾ ಜೆ. ಎಸ್. ಕಾರ್ಯಕ್ರಮವನ್ನು ಸಮರ್ಥವಾಗಿ ನಿರೂಪಿಸಿದರು. ಬಿ ಎಸ್ಸಿ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಎಂ. ಎಸ್ ಆತ್ಮೀಯವಾಗಿ ಸ್ವಾಗತಿಸಿದರು.ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಕುಮಾರಿ ಅಪೂರ್ವ ಅವರು ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮವು ಸಂಸ್ಥೆಯ ಗೀತೆಯೊಂದಿಗೆ ಸಮಾಪ್ತಿಯಾಯಿತು.

ಭಾವನಾತ್ಮಕ ಕ್ಷಣಗಳು, ಕೃತಜ್ಞತೆ ಮತ್ತು ಶುಭಾಶಯಗಳಿಂದ ಕೂಡಿದ ಈ ಬೀಳ್ಕೊಡುಗೆ ಸಮಾರಂಭವು ಯಶಸ್ವಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಅಮೂಲ್ಯ ನೆನಪುಗಳನ್ನು ನೀಡಿತು.

LEAVE A REPLY

Please enter your comment!
Please enter your name here