ಅನಿಲ ಸಿಲಿಂಡರ್‌ ಅಕ್ರಮ ದಾಸ್ತಾನು ಪತ್ತೆ..!

0
96

ಉಡುಪಿ : ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿಕೊಂಡು ಮೀನುಗಾರಿಕಾ ದೋಣಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಲ್ಪೆ ಠಾಣಾ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೊಡವೂರು ಗ್ರಾಮದ ಮಲ್ಪೆ ಜಂಕ್ಷನ್ ನಿವಾಸಿ ಸನತ್ ಆರ್. ಕಾಮತ್ (43) ಎಂದು ಗುರುತಿಸಲಾಗಿದೆ. ಸನತ್ ಕಾಮತ್ ಎಂಬಾತ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ, ಉಡುಪಿ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರ್ ಆಶಾ ಕೆ. ಹಾಗೂ ಆಹಾರ ನಿರೀಕ್ಷಕ ಹಿತೇಶ್ ಯು.ಬಿ. ಅವರು ಮಲ್ಪೆ ಪೊಲೀಸರೊಂದಿಗೆ ಕಾರ್ಯಾಚರಣೆಗೆ ಇಳಿದರು. ಮಲ್ಪೆ ಜಂಕ್ಷನ್ ಬಳಿ ಇರುವ ಆರೋಪಿಯ ಮನೆ ಅಂಗಳಕ್ಕೆ ಮಲ್ಪೆ ಪಿಎಸ್‌ಐ ಅನಿಲ್ ಕುಮಾರ್ ಮತ್ತು ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದ್ದು, ಈ ವೇಳೆ ಸ್ಥಳದಲ್ಲಿ 19 ಕೆ.ಜಿಯ ಅನಿಲ ತುಂಬಿದ 1 ಸಿಲಿಂಡರ್ ಸೇರಿದಂತೆ ಒಟ್ಟು 12 ವಾಣಿಜ್ಯ ಸಿಲಿಂಡರ್‌ಗಳು ಹಾಗೂ 5 ಕೆ.ಜಿಯ 9 ವಾಣಿಜ್ಯ ಸಿಲಿಂಡರ್‌ಗಳು ಪತ್ತೆಯಾಗಿವೆ. ಆರೋಪಿಯನ್ನು ವಿಚಾರಿಸಿದಾಗ, ಮೀನುಗಾರಿಕಾ ಉದ್ದೇಶಗಳಿಗಾಗಿ ಬಳಸುವವರಿಗೆ ಮಾರಾಟ ಮಾಡಲು ಇವುಗಳನ್ನು ಸಂಗ್ರಹಿಸಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪರವಾನಗಿ ಅಥವಾ ಅಧಿಕೃತ ದಾಖಲೆಗಳು ಆತನ ಬಳಿ ಇರಲಿಲ್ಲ. ಪತ್ತೆಯಾದ ಎಲ್ಲಾ 21 ವಾಣಿಜ್ಯ ಸಿಲಿಂಡರ್‌ಗಳನ್ನು ಆಹಾರ ಶಿರಸ್ತೇದಾರರು ಮಹಜರು ಪ್ರಕ್ರಿಯೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅತ್ಯಗತ್ಯ ವಸ್ತುಗಳ ಕಾಯ್ದೆ ಮತ್ತು ಎಲ್‌ಪಿಜಿ ನಿಯಂತ್ರಣ ಆದೇಶದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಸನತ್ ಕಾಮತ್‌ನನ್ನು ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

LEAVE A REPLY

Please enter your comment!
Please enter your name here