ವಿಶ್ವ ಪರಿಸರ ದಿನಾಚರಣೆ – ಮುತ್ತೂಟ್ ಫೈನಾನ್ಸ್ 

0
21

ಮುತ್ತೂಟ್ ಫೈನಾನ್ಸ್ ಹಾಗೂ ಕಸ್ವಿ ಹಸಿರು ದಿಬ್ಬಣ ಸಹಯೋಗದಲ್ಲಿ ಎಕ್ಕೂರಿನ KHB ಲೇಔಟ್ ಪಾರ್ಕ್‌ನಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಕಸ್ವಿಯ 5ನೇ ಹುಟ್ಟುಹಬ್ಬದ ಪ್ರಯುಕ್ತ ನಿರ್ಮಾಣಗೊಳ್ಳುತ್ತಿರುವ ಪ್ರಕೃತಿ ಪ್ರೇಮದ ಗೀತೆಯ ಶೀರ್ಷಿಕೆ “ತೋರಣ” ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುತ್ತೂಟ್ ಫೈನಾನ್ಸ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಶಾಂತ್ ನಾಯಕ್ ವಹಿಸಿ ಮಾತನಾಡಿದರು. ಮುತ್ತೂಟ್ ಫೈನಾನ್ಸ್ ತನ್ನ ಸಿಎಸ್‌ಆರ್ ಯೋಜನೆಗಳ ಮೂಲಕ ವಿಧವಾ ಮಹಿಳೆಯರ ಪುತ್ರಿಯರ ವಿವಾಹಕ್ಕೆ ಆರ್ಥಿಕ ನೆರವು, ಕ್ಯಾನ್ಸರ್ ರೋಗಿಗಳ ಕಿಮೋಥೆರಪಿಗೆ ಸಹಾಯ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದೀಗ KHB ಪಾರ್ಕ್ ಅಭಿವೃದ್ಧಿಗೂ ಕೈಜೋಡಿಸಿರುವುದು ಸಂತಸದ ವಿಷಯ ಎಂದರು. ಈ ಪಾರ್ಕ್ ಈಗ ಮೊದಲಿಗಿಂತ ಹೆಚ್ಚು ಹಸಿರುಮಯವಾಗಿ ರೂಪುಗೊಂಡಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೇಶವ ರಾಮಕುಂಜ ಅವರು, ಮುತ್ತೂಟ್ ಫೈನಾನ್ಸ್ ಈ ಹಿಂದೆ ಕಸ್ವಿ ಹಸಿರು ದಿಬ್ಬಣದೊಂದಿಗೆ ಸೇರಿ ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ವಿತರಣೆ, ಶಿಶು ಪೋಷಣಾ ಕೊಠಡಿ ನಿರ್ಮಾಣ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿರುವುದನ್ನು ಸ್ಮರಿಸಿ, ಪಾರ್ಕ್ ಅಭಿವೃದ್ಧಿಗೆ ನೀಡಿದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ರೇಖಾ ಜೆ. ಶೆಟ್ಟಿ ಅವರು ಕಸ್ವಿ ಹಸಿರು ದಿಬ್ಬಣದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಮುತ್ತೂಟ್ ಫೈನಾನ್ಸ್‌ನ ಸಾಮಾಜಿಕ ಬದ್ಧತೆಯನ್ನು ಅಭಿನಂದಿಸಿದರು.

ಪ್ರವೀಣ್ ಚಂದ್ರ ಆಳ್ವ ಅವರು ಮಾತನಾಡಿ, ಎಕ್ಕೂರು ಭಾಗದ ನಾಗರಿಕರಲ್ಲಿ ಉತ್ತಮ ನಾಗರಿಕ ಪ್ರಜ್ಞೆ ಇರುವುದರಿಂದಲೇ ಇಂತಹ ಪರಿಸರಪರ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.

ಯುವ ಉದ್ಯಮಿ ನಂದನ್ ಮಲ್ಯ ಅವರು, “ಪರಿಸರ ಎಂಬುದು ನಮ್ಮ ಪಿತ್ರಾರ್ಜಿತ ಆಸ್ತಿ ಅಲ್ಲ; ಹಿಂದಿನ ಪೀಳಿಗೆಯಿಂದ ನಾವು ಪಡೆದುಕೊಂಡಿರುವ ಸಾಲ. ಅದನ್ನು ಮುಂದಿನ ಪೀಳಿಗೆಗೆ ಯಾವ ರೂಪದಲ್ಲಿ ಹಸ್ತಾಂತರಿಸುತ್ತೇವೆ ಎಂಬುದೇ ನಿಜವಾದ ವನಸತ್ವ” ಎಂದು ಹೇಳಿದರು.

ಆರ್‌ಜೆ ನಯನ ಅವರು ಮಾತನಾಡಿ, ಕಸ್ವಿಯ ತಂದೆ-ತಾಯಿ ತಮ್ಮ ಮಗಳ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸುತ್ತಿರುವುದು ಇತರ ಪೋಷಕರಿಗೂ ಮಾದರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳ ಹುಟ್ಟುಹಬ್ಬದಂದು ಒಂದು ಗಿಡ ನೆಟ್ಟು, ಕಸ್ವಿ ಹಸಿರು ದಿಬ್ಬಣದಿಂದ ಉಚಿತ ಪ್ರಮಾಣಪತ್ರ ಪಡೆದು ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು. “ಈ ವರ್ಷ ಒಂದು ಗಿಡ ನೆಡುತ್ತೇನೆ” ಎಂಬ ಸಂಕಲ್ಪ ಪ್ರತಿಯೊಬ್ಬರಿಂದ ಮೂಡಿಬಂದರೆ ಅದಕ್ಕಿಂತ ಸಂತಸದ ಸಂಗತಿ ಮತ್ತೊಂದಿಲ್ಲ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ “ಪ್ರತಿಯೊಬ್ಬರು ಹುಟ್ಟುಹಬ್ಬಕ್ಕೆ ಗಿಡ ನೆಡಿ” ಎಂಬ ಸಂದೇಶದೊಂದಿಗೆ ಪರಿಸರ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮುತ್ತೂಟ್ ಫೈನಾನ್ಸ್ ಸಿಎಸ್ಆರ್ ವಲಯ ಅಧಿಕಾರಿ ಪ್ರಸಾದ್ , ಕಸ್ವಿ ಹಸಿರು ದಿಬ್ಬಣದ ಅಧ್ಯಕ್ಷರಾದ ಶ್ರದ್ಧಾಕೇಶವ ರಾಮಕುಂಜ, ಕಾರ್ಯದರ್ಶಿ ಬಾಬುಗೌಡ ಪೊಯ್ಯ , ಸಂದೇಶ್ ನೀರುಮಾರ್ಗ ,ಮಂಜುಳ ವಾರಿಜಾಕ್ಷ ,ರೋ.ಭಾಸ್ಕರ್ ರೈ ಕಟ್ಟ ಇನ್ನಿತರ ಗಣ್ಯರು ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶೆಲ್ಡನ್ ಕ್ರಾಸ್ತಾ ನಿರೂಪಿಸಿದರು. 

LEAVE A REPLY

Please enter your comment!
Please enter your name here