ಉಡುಪಿ : ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಉಪನ್ಯಾಸಕರಿಗಾಗಿ ಒಂದು ದಿನದ ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಇಲ್ಲಿನ ಖ್ಯಾತ ಮನೋವೈದ್ಯ ಹಾಗೂ ಲೇಖಕರಾದ ಡಾ.ವಿರೂಪಾಕ್ಷ ದೇವರಮನೆ ಭಾಗವಹಿಸಿದರು. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕುರಿತು ಮಾಹಿತಿ ನೀಡಿದ ಅವರು, ಹದಿಹರೆಯದ ವಿದ್ಯಾರ್ಥಿಗಳು ಎದುರಿಸುವ ಹಲವಾರು ಸಮಸ್ಯೆಗಳು ಹಾಗೂ ಪರಿಹಾರ, ಈ ಹಂತದಲ್ಲಿ ಸಹಜವಾಗಿ ನಡೆಯುವ ಹಾರ್ಮೋನ್ ಬದಲಾವಣೆಗಳು, ಸಮಸ್ಯಾತ್ಮಕ ಮಗುವಿನೊಂದಿಗೆ ಒಬ್ಬ ಶಿಕ್ಷಕ ನಡೆದುಕೊಳ್ಳಬೇಕಾದ ನಡವಳಿಕೆ ಈ ಮುಂತಾದ ವಿಷಯಗಳ ಕುರಿತು ವಿಶೇಷ ಮಾಹಿತಿಗಳನ್ನು ನೀಡಿದರು.

ಕಾರ್ಯಾಗಾರದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ, ಪ್ರಾಂಶುಪಾಲರಾದ ದೇವಿಚರಣ್ ರೈ ಎಮ್. ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಾಪಕ ವೃಂದದವರು ಭಾಗಿಯಾದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಶ್ರುತಿ ಎಂ.ಎಸ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

