ಆಹಾರವೇ ಔಷಧವಾಗಿದ್ದ ಕಾಲದಿಂದ, ಔಷಧವನ್ನೇ ಆಹಾರವಾಗಿಸುವ ಸ್ಥಿತಿಗೆ ಬಂದಿದ್ದೇವೆ: ಸುಧಾಕರ ರಾವ್ ಪೇಜಾವರ

0
3

ಮಂಗಳೂರು: “ಹಿಂದಿನ ಕಾಲದಲ್ಲಿ ನಾವು ಸೇವಿಸುವ ಆಹಾರವೇ ದೇಹಕ್ಕೆ ಔಷಧಿಯಂತಿದ್ದರೆ, ಇಂದಿನ ದಿನಗಳಲ್ಲಿ ಮದ್ದುಗಳನ್ನೇ ಆಹಾರದಂತೆ ಸೇವಿಸುವ ದುಸ್ಥಿತಿ ನಿರ್ಮಾಣವಾಗಿದೆ” ಎಂದು ನಿವೃತ್ತ ಪ್ರಾಚಾರ್ಯರಾದ ಸುಧಾಕರ ರಾವ್ ಪೇಜಾವರ ಕಳವಳ ವ್ಯಕ್ತಪಡಿಸಿದರು.

ಶಿವಳ್ಳಿ ಸ್ಪಂದನ ಕದ್ರಿ ವಲಯದ ವತಿಯಿಂದ ಆಯೋಜಿಸಲಾಗಿದ್ದ ‘ಆಟಿ ಕೂಟ’ ಕಾರ್ಯಕ್ರಮದಲ್ಲಿ ‘ಆಟಿ ತಿಂಗಳ ಮಹತ್ವ’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಬದುಕಲು ತಿನ್ನಬೇಕೆ ಹೊರತು, ತಿನ್ನುವುದೇ ಬದುಕಾಗಬಾರದು ಎಂದು ಪ್ರತಿಪಾದಿಸಿದ ಅವರು, “ನಮ್ಮ ಹಿರಿಯರು ಪ್ರತಿಯೊಂದು ಋತುಮಾನಕ್ಕೆ ಅನುಗುಣವಾಗಿ ನೈಸರ್ಗಿಕ ಖಾದ್ಯಗಳನ್ನು ತಯಾರಿಸುತ್ತಿದ್ದರು. ಅವರು ಸೇವಿಸುತ್ತಿದ್ದ ಆಹಾರವು ದೇಹದ ಆರೋಗ್ಯಕ್ಕೆ ಪೂರಕವಾಗಿರುತ್ತಿತ್ತು,” ಎಂದು ತಿಳಿಸಿದರಲ್ಲದೆ, ಆಟಿ ತಿಂಗಳ ಆಚರಣೆಗಳು, ಸಂಪ್ರದಾಯಗಳು ಮತ್ತು ಅವುಗಳ ಸಾಂಸ್ಕೃತಿಕ ಹಾಗೂ ಆರೋಗ್ಯದ ಮಹತ್ವವನ್ನು ಸುದೀರ್ಘವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಲತಾ ಎಸ್. ಭಟ್ ಅವರು ಆಟಿ ತಿಂಗಳ ವೈಶಿಷ್ಟ್ಯತೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೀತಾ ಬೆಳ್ಳೆ ವಹಿಸಿದ್ದರು.

ವೇದಿಕೆಯಲ್ಲಿ ಶಿವಳ್ಳಿ ಸ್ಪಂದನ ತಾಲೂಕು ಅಧ್ಯಕ್ಷ ವಾಸುದೇವ ಭಟ್ ಕುಂಜತ್ತೋಡಿ, ಕಾರ್ಯದರ್ಶಿ ಕೃಷ್ಣ ಭಟ್ ಕದ್ರಿ, ನೋಡು ಶ್ರೀನಿವಾಸ್ ಆಚಾರ್, ಕದ್ರಿ ವಲಯದ ಗೌರವಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ಕಾರ್ಯದರ್ಶಿ ಶೀಲಾ ಜಯಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ರಮಾಮಣಿ, ವನಿತಾ ಎಲ್ಲೂರು ಉಪಸ್ಥಿತರಿದ್ದರು.

ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ರವಿಕಾಂತ ಭಟ್ ವಂದಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಶಿವಳ್ಳಿ ಸಮುದಾಯದ ಸದಸ್ಯರು ತಮ್ಮ ತಮ್ಮ ಮನೆಗಳಿಂದ ಉತ್ಸಾಹದಿಂದ ತಯಾರಿಸಿ ತಂದಿದ್ದ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಪರಸ್ಪರ ಹಂಚಿಕೊಂಡು ಸವಿದರು. 

LEAVE A REPLY

Please enter your comment!
Please enter your name here