ಉಡುಪಿ : ಕೊಡಗು ಪ್ರವಾಸಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹೊರಟ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆ ಪ್ರದೇಶದಲ್ಲಿ ವರದಿಯಾಗಿದೆ.
ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಸೌಂದರ್ಯ ಹೆಚ್.ಎ. (20) ಎಂದು ಗುರುತಿಸಲಾಗಿದೆ. ಮೇ 30ರಂದು ತನ್ನ ಕಾಲೇಜಿನ ಸ್ನೇಹಿತರೊಂದಿಗೆ ಕೊಡಗು ಪ್ರವಾಸಕ್ಕೆ ತೆರಳುವುದಾಗಿ ಕುಟುಂಬದವರಿಗೆ ತಿಳಿಸಿ ಮನೆಯಿಂದ ಹೊರಟಿದ್ದಳು. ಆದರೆ ಬಳಿಕ ಆಕೆ ಪ್ರವಾಸಕ್ಕೂ ತೆರಳಿಲ್ಲ ಹಾಗೂ ಮನೆಗೂ ಹಿಂದಿರುಗಿಲ್ಲ ಎಂದು ತಿಳಿದುಬಂದಿದೆ.
ಯುವತಿಯ ಬಗ್ಗೆ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ನಾಪತ್ತೆಯಾದ ಸೌಂದರ್ಯ ಸುಮಾರು 4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ (0820-2520444), ಉಡುಪಿ ಕಂಟ್ರೋಲ್ ರೂಂ (0820-2526444), ಪೊಲೀಸ್ ನಿರೀಕ್ಷಕರು (9480805408) ಅಥವಾ ಪೊಲೀಸ್ ಉಪನಿರೀಕ್ಷಕರು (9080805445) ಅವರನ್ನು ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣೆ ಕೋರಿದೆ.

