ಜನರ ವಿಶ್ವಾಸವೇ ದೊಡ್ಡ ಗೆಲುವು : ಅಮರ್ ಕೋಟೆ
ಮೂಡುಬಿದಿರೆ : ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ವಿದ್ಯಾನಂದ ಶೆಟ್ಟಿ ಅವರಿಗೆ ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧ ಮಾಧ್ಯಮಗಳ ಮೂಲಕ ಬೆಂಬಲ ವ್ಯಕ್ತಪಡಿಸಿದ ಅಭಿಮಾನಿಗಳು, ಹಿತೈಷಿಗಳು ಮತ್ತು ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಅವರ ಅಭಿಮಾನಿಗಳ ಬಳಗದ ವತಿಯಿಂದ ತೆಂಕಮಿಜಾರಿನಲ್ಲಿ ಕೃತಜ್ಞತಾ ಸಭೆ ನಡೆಯಿತು.
ಸಭೆಯಲ್ಲಿ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಂದ ಆಗಮಿಸಿದ್ದ ಸಾರ್ವಜನಿಕರು, ಅಭಿಮಾನಿಗಳು, ಮಾರ್ಗದರ್ಶಕರು ಹಾಗೂ ಹಿತೈಷಿಗಳು ಸೇರಿದಂತೆ ಸುಮಾರು 400ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾನಂದ ಶೆಟ್ಟಿ, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳು ಹಾಗೂ ತಮಗಾದ ನಿರಾಸೆಯ ಕುರಿತು ವಿವರಿಸಿದರು. ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪರವಾಗಿ ನಿಂತು ನೈತಿಕ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಭಜರಂಗದಳದ ಪ್ರಮುಖ ಅಭಿಲಾಷ್ ಮಾತನಾಡಿ, ವಿದ್ಯಾನಂದ ಶೆಟ್ಟಿ ಅವರ ಸರಳತೆ, ವಿನಯಶೀಲತೆ ಹಾಗೂ ಜನಸೇವಾ ಮನೋಭಾವವನ್ನು ಶ್ಲಾಘಿಸಿದರು. ಜನರ ಸೇವೆಗೆ ಬದ್ಧರಾಗಿರುವ ವ್ಯಕ್ತಿಗೆ ನ್ಯಾಯ ದೊರೆಯಬೇಕು. ಅವರಿಗೆ ಆಗಿರುವ ಅನ್ಯಾಯಕ್ಕೆ ಮುಂದಿನ ದಿನಗಳಲ್ಲಿ ಸೂಕ್ತ ನ್ಯಾಯ ಸಿಗಲಿ ಎಂದು ಹಾರೈಸಿದರು.
ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ ಮಾತನಾಡಿ, ಹುದ್ದೆಗಳು ಮತ್ತು ಸ್ಥಾನಮಾನಗಳು ಕ್ಷಣಿಕವಾದವು. ಆದರೆ ಜನರ ಪ್ರೀತಿ ಹಾಗೂ ವಿಶ್ವಾಸ ಗಳಿಸುವುದು ದೊಡ್ಡ ಸಾಧನೆ. ಇಷ್ಟು ಜನರು ಸ್ವಯಂಪ್ರೇರಿತರಾಗಿ ಒಂದೆಡೆ ಸೇರಿರುವುದು ವಿದ್ಯಾನಂದ ಶೆಟ್ಟಿ ಈಗಾಗಲೇ ಜನರ ಮನಸ್ಸುಗಳನ್ನು ಗೆದ್ದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜನಸೇವೆಯಲ್ಲಿ ತೊಡಗಿರುವ ನಿಷ್ಠಾವಂತ ನಾಯಕನಿಗೆ ನಡೆದಿರುವ ಬೆಳವಣಿಗೆಗಳು ಖೇದಕರವಾಗಿದ್ದು, ಇಂತಹ ನಿರ್ಲಕ್ಷ್ಯ ಮತ್ತು ತಪ್ಪು ನಿರ್ಧಾರಗಳು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದುಬಾರಿಯಾಗಬಹುದು ಎಂದು ಅಭಿಪ್ರಾಯಪಟ್ಟರು.
ತೆಂಕಮಿಜಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮುತ್ತು ಮಾತನಾಡಿ, ವಿದ್ಯಾನಂದ ಶೆಟ್ಟಿಗೆ ಆಗಿರುವ ಅವಮಾನವನ್ನು ವೈಯಕ್ತಿಕವಾಗಿ ನೋವಿನಿಂದ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಅವರು ಯಾವುದೇ ನಿರ್ಧಾರ ಕೈಗೊಂಡರೂ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರು.
ವಿದ್ಯಾನಂದ ಶೆಟ್ಟಿ ಅವರ ತಂದೆ ಸದಾಶಿವ ಶೆಟ್ಟಿ ಮಾತನಾಡಿ, ಸುಮಾರು ಎರಡು ದಶಕಗಳ ಕಾಲ ಪಂಚಾಯತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದರೂ ಇಂತಹ ಬೆಳವಣಿಗೆಗಳನ್ನು ಕಂಡಿಲ್ಲ. ತಮ್ಮ ಮಗ ಯಾವುದೇ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ನಡೆದ ಬೆಳವಣಿಗೆಗಳು ಬೇಸರ ಉಂಟುಮಾಡಿವೆ. ಜನಸೇವಕರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.
ಅಶ್ವತ್ಥಪುರ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ, ವಿದ್ಯಾನಂದ ಶೆಟ್ಟಿ ಅವರ ಮುಂದಿನ ಸಾರ್ವಜನಿಕ ಹಾಗೂ ಸಾಮಾಜಿಕ ಜೀವನದ ನಿರ್ಧಾರಗಳಿಗೆ ಶುಭ ಹಾರೈಸಿದರು. ಸಭೆಯಲ್ಲಿ ಮಾಜಿ ಸದಸ್ಯ ರಾಮಚಂದ್ರ ಗೌಡ, ಸ್ಥಳೀಯ ಹಿರಿಯ ದೂಜ ಶೆಟ್ಟಿ ಉಪಸ್ಥಿತರಿದ್ದರು. ಹಲವರು ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಅತಿವೃಷ್ಟಿ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ದೊರಕಿಸಲು ಮಾಡಿದ ಪ್ರಯತ್ನ, ರಸ್ತೆ ಅಭಿವೃದ್ಧಿ, ಬೀದಿದೀಪ ಅಳವಡಿಕೆ ಹಾಗೂ ಶಾಲೆ ಮತ್ತು ಅಂಗನವಾಡಿ ಮೂಲಸೌಕರ್ಯ ಅಭಿವೃದ್ಧಿಗೆ ವಿದ್ಯಾನಂದ ಶೆಟ್ಟಿ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಪ್ರಶಾಂತ್ ಜೆ. ನಿರೂಪಿದರು .

