ಉಡುಪಿ : ಬಟ್ಟೆ ಒಣಗಿಸಲು ಹೋಗುತ್ತಿದ್ದ ವೃದ್ಧೆಯೊಬ್ಬರು ಸೆಪ್ಟಿಕ್ ಟ್ಯಾಂಕ್ ಸ್ಲ್ಯಾಬ್ ಮುರಿದು ಒಳಗೆ ಬಿದ್ದು ಮೃತಪಟ್ಟ ಘಟನೆ ಬಡಾನಿಡಿಯೂರು ಗ್ರಾಮದಲ್ಲಿ ನಡೆದಿದೆ. ಬಡಾನಿಡಿಯೂರು ನಿವಾಸಿ ಆಲಿಸ್ ಡಿಸೋಜ (74) ಮೃತಪಟ್ಟ ದುರ್ದೈವಿ. ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಆಲಿಸ್ ಡಿಸೋಜ ಅವರು ಮನೆಯ ಬಟ್ಟೆಗಳನ್ನು ತೊಳೆದು ಒಣಗಿಸಲು ಹೊರಗೆ ಹೋಗುತ್ತಿದ್ದರು.
ಈ ವೇಳೆ ದಾರಿಯ ಮಧ್ಯೆ ಇದ್ದ ಸೆಪ್ಟಿಕ್ ಟ್ಯಾಂಕ್ನ ಮೇಲಿನ ಕಲ್ಲಿನ (ಮೂಡುಗಲ್ಲು) ಮೇಲೆ ಅವರು ಕಾಲಿಟ್ಟಾಗ, ಕಲ್ಲು ಒಮ್ಮೆಲೇ ಮುರಿದುಹೋಗಿದೆ. ಪರಿಣಾಮ ಆಲಿಸ್ ಅವರು ಟ್ಯಾಂಕ್ನ ಒಳಗೆ ಬಿದ್ದು ಸಿಲುಕಿಕೊಂಡಿದ್ದರು. ಇವರ ಮಗ ಶಾಲ್ಫಿನ್ ಫೆರ್ನಾಂಡಿಸ್ ಬಂದು ನೋಡಿದಾಗ ತಾಯಿ ಟ್ಯಾಂಕ್ನ ಕಲ್ಲುಗಳ ಮಧ್ಯೆ ಸಿಲುಕಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ ಅವರ ಸಹಾಯದೊಂದಿಗೆ ತಾಯಿಯನ್ನು ಮೇಲಕ್ಕೆ ಎತ್ತಿದ್ದರು.
ಅದಾಗಲೇ ಅವರು ಮೃತಪಟ್ಟಿದ್ದರು. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

