ಫ್ರೀ ಬಸ್ ಪಾಸ್ ಬಳಿಕ ವಿದ್ಯಾರ್ಥಿಗಳ ಹೊಸ ಬೇಡಿಕೆ : ರಿಯಾಯಿತಿ ಮೆಟ್ರೋ ಪಾಸ್ ನೀಡುವಂತೆ ಸಿಎಂಗೆ ಮನವಿ!

0
93

ಬೆಂಗಳೂರು : ರಾಜ್ಯ ಸರ್ಕಾರ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಬೆಂಗಳೂರಿನ ವಿದ್ಯಾರ್ಥಿಗಳು ನಮ್ಮ ಮೆಟ್ರೋದಲ್ಲಿ ರಿಯಾಯಿತಿ ದರದ ವಿದ್ಯಾರ್ಥಿ ಪಾಸ್ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ರಾಜ್ಯದ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಘೋಷಿಸಿದ್ದರು. ಇದರ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ವಿದ್ಯಾರ್ಥಿಗಳು ಮೆಟ್ರೋ ಪ್ರಯಾಣಕ್ಕೂ ವಿಶೇಷ ರಿಯಾಯಿತಿ ನೀಡುವಂತೆ ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಪ್ರಕಾರ, ಉಚಿತ ಪಾಸ್ ಅಗತ್ಯವಿಲ್ಲ. ಆದರೆ ಕನಿಷ್ಠ ರಿಯಾಯಿತಿ ದರದಲ್ಲಿ ತಿಂಗಳ ಅಥವಾ ವಾರ್ಷಿಕ ಮೆಟ್ರೋ ಪಾಸ್ ನೀಡಿದರೆ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮೆಟ್ರೋ ಪ್ರಯಾಣದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ವರದಿಗಳು ತಿಳಿಸಿವೆ. ಜೊತೆಗೆ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗುವುದರಿಂದ ರಸ್ತೆ ಸಂಚಾರ ದಟ್ಟಣೆ ಹಾಗೂ ವಾಯು ಮಾಲಿನ್ಯವೂ ಇಳಿಕೆಯಾಗಲಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಬೈಕ್ ಮತ್ತು ಖಾಸಗಿ ವಾಹನಗಳಲ್ಲಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಅಪಘಾತದ ಅಪಾಯ ಹೆಚ್ಚಿದ್ದು, ಮೆಟ್ರೋ ಪಾಸ್ ಜಾರಿಯಾದರೆ ಸುರಕ್ಷಿತ ಸಂಚಾರಕ್ಕೆ ಉತ್ತೇಜನ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಉಚಿತ ಬಸ್ ಪಾಸ್ ವಿತರಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿರುವ ನಡುವೆಯೇ, ವಿದ್ಯಾರ್ಥಿಗಳ ಈ ಹೊಸ ಬೇಡಿಕೆಗೆ ಸರ್ಕಾರ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

LEAVE A REPLY

Please enter your comment!
Please enter your name here