ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿರುವ ಮಾಜಿ ಶಾಸಕ ಗೋಪಾಲ್ ಪೂಜಾರಿ ಅವರ ಹೇಳಿಕೆಗೆ ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಹಾಗೂ ಮಾಧ್ಯಮ ವಕ್ತಾರ ರತನ್ ರಮೇಶ್ ಪೂಜಾರಿ ತೀವ್ರ ತಿರುಗೇಟು ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಇದರಿಂದ ಸಂಕಷ್ಟ ಅನುಭವಿಸಿದ ಲಕ್ಷಾಂತರ ವಿದ್ಯಾರ್ಥಿಗಳ ಬಗ್ಗೆ ಬಿಜೆಪಿಗೆ ಕಳವಳವಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಈಗಾಗಲೇ ಕೈಗೊಳ್ಳಲಾಗಿದ್ದು, ಭಾಗಿಯಾಗಿರುವ ಆರೋಪಿಗಳು ಜೈಲು ಸೇರಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಶಿಕ್ಷೆ ಹಾಗೂ ದಂಡದ ವ್ಯವಸ್ಥೆ ಮಾಡಲಾಗಿದ್ದು, ತಂತ್ರಜ್ಞಾನ ಆಧಾರಿತ ಸುಧಾರಣೆಗಳಿಗಾಗಿ ನಂದನ್ ನೀಲೇಕಣಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನೂ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಕೇಳುತ್ತಿರುವ ಗೋಪಾಲ್ ಪೂಜಾರಿ ಅವರ ಹೇಳಿಕೆ ರಾಜಕೀಯ ಪ್ರೇರಿತ ಮತ್ತು ಅಗ್ಗದ ಪ್ರಚಾರದ ಪ್ರಯತ್ನವಾಗಿದೆ ಎಂದು ರತನ್ ರಮೇಶ್ ಪೂಜಾರಿ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಲವು ಪರೀಕ್ಷಾ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗಳು ನಡೆದಿವೆ. ಕಿಮ್ಮನೆ ರತ್ನಾಕರ್ ಶಿಕ್ಷಣ ಸಚಿವರಾಗಿದ್ದಾಗ ಹಾಗೂ ನಂತರ ಮಧು ಬಂಗಾರಪ್ಪ ಅವರ ಅವಧಿಯಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿದ್ದವು. ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳ ಅಕ್ರಮಗಳ ವಿಚಾರದಲ್ಲಿಯೂ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದರೂ, ಆ ಸಂದರ್ಭಗಳಲ್ಲಿ ಕಾಂಗ್ರೆಸ್‌ನ ಯಾವ ಸಚಿವರು ಅಥವಾ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು ಎಂಬುದಕ್ಕೆ ಉತ್ತರ ನೀಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದಂತಹ ಸೂಕ್ಷ್ಮ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಬದಲು, ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ಮೋದಿ ಸರ್ಕಾರ ಯುವಜನರ ಭವಿಷ್ಯ ರಕ್ಷಿಸುವ ದೃಢಸಂಕಲ್ಪದೊಂದಿಗೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರತನ್ ರಮೇಶ್ ಪೂಜಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

