ಉಡುಪಿ : ರಾಜಾಂಗಣದ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಪ್ರವಾಸಿಗರು ಹಾಗೂ ಸ್ಥಳೀಯ ಕಾರು ಚಾಲಕನ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಪರಸ್ಪರ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಹಾಗೂ ಕೌಂಟರ್ ಕೇಸ್ ದಾಖಲಾಗಿದ್ದು, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ನ ಸೀತಾಫಲ್ ಮಂಡಿ ನಿವಾಸಿ ರಂಗ ರಾವ್ ಎಂಬುವವರು ಜೂನ್ 9ರಂದು ಸಂಜೆ 7:50ರ ಸುಮಾರಿಗೆ ತಮ್ಮ ಕುಟುಂಬದೊಂದಿಗೆ ಶ್ರೀಕೃಷ್ಣ ಮಠದ ದರ್ಶನಕ್ಕಾಗಿ ಆಗಮಿಸಿದ್ದರು. ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ, ದೇವಸ್ಥಾನಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ, ಒಮ್ಮೇಲೆ ಸುಪ್ರೀತ್ ಎಂಬಾತ ತನ್ನ ಕಾರನ್ನು ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು, ಇದನ್ನು ಪ್ರಶ್ನಿಸಿದಾಗ ಉದ್ಧಟತನದ ಉತ್ತರ ನೀಡಿ ಕಾರಿನಿಂದ ಲಾಠಿಯಂತಹ ಕೋಲನ್ನು ತೆಗೆದುಕೊಂಡು ಬಂದು ರಂಗ ರಾವ್ ಅವರ ತಲೆಗೆ ಹೊಡೆದಿದ್ದಾನೆ. ಹಲ್ಲೆಯ ತೀವ್ರತೆಗೆ ರಂಗ ರಾವ್ ಅವರ ತಲೆಯಿಂದ ತೀವ್ರ ರಕ್ತಸ್ರಾವ ಉಂಟಾಗಿದೆ. ಈ ಘಟನೆಯಲ್ಲಿ ಕುಟುಂಬದಲ್ಲಿದ್ದ ಮಗುವಿಗೂ ತೊಂದರೆಯಾಗಿದೆ ಎಂದು ದೂರು ನೀಡಿದ್ದಾರೆ.
ಕೌಂಟರ್ ಕೇಸ್
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ, ಕೊರಂಗ್ರಪಾಡಿ ಗ್ರಾಮದ ಸಾಯಿ ಸದನ ನಿವಾಸಿ ಸುಪ್ರೀತ್ ಕುಮಾರ್ (40) ಎಂಬುವವರು ಕೌಂಟರ್ ದೂರು ದಾಖಲಿಸಿದ್ದಾರೆ. ಹೆಂಡತಿ ಮತ್ತು ಮಗುವಿನೊಂದಿಗೆ ಕಲ್ಸಂಕ-ರಾಜಾಂಗಣ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದಾಗ, ಹೈದರಾಬಾದ್ ಮೂಲದವರ ಕಾರಿನ ಚಾಲಕ ಅಜಾಗರೂಕತೆಯಿಂದ ಚಲಾಯಿಸಿ ಡಿಕ್ಕಿ ಹೊಡೆಯಲು ಬಂದಿದ್ದು, ಇದನ್ನು ಪ್ರಶ್ನಿಸಿದಾಗ ಕಾರಿನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರು ಕೆಳಗಿಳಿದು, ತಮ್ಮ ಬಳಿಯಿದ್ದ ಫೋಟೋ ಸ್ಟ್ಯಾಂಡ್ ಹಾಗೂ ಕುರ್ಚಿಗಳಿಂದ ಸುಪ್ರೀತ್ ಹಾಗೂ ಕಾರಿನಲ್ಲಿದ್ದ ಅವರ ಪತ್ನಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕಬ್ಬಿಣದ ವಸ್ತು ಹಾಗೂ ಬ್ಯಾಗಿನಲ್ಲಿದ್ದ ಸಾಮಗ್ರಿಗಳಿಂದ ಹಲ್ಲೆ ನಡೆಸಿದ್ದರಿಂದ ನಾಲಿಗೆಯಿಂದ ರಕ್ತಸ್ರಾವವಾಗಿದೆ. ಜಗಳದ ವೇಳೆ ಆರೋಪಿಗಳು ಕಾರಿನ ಮುಂಭಾಗದ ಗ್ಲಾಸ್ ಹಾಗೂ ಕಿಟಕಿ ಕನ್ನಡಿಗಳನ್ನು ಹೊಡೆದು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಬಂಧನ
ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಕಾನೂನು ಕೈಗೆತ್ತಿಕೊಂಡು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಆರೋಪಿ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಕುಮಾರ್ ಎಂಬಾತನನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವಾಸಿಗರು ಹಾಗೂ ಸ್ಥಳೀಯರ ನಡುವಿನ ಈ ಮಾರಾಮಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

