ಮಧ್ಯಾಹ್ನ ಹೊಟ್ಟೆತುಂಬಾ ಊಟ ಮಾಡಿದ ಬಳಿಕ ಸ್ವಲ್ಪ ಹೊತ್ತು ಮಲಗಿ ನಿದ್ರೆ ಮಾಡಬೇಕೆಂದು ಅನಿಸದವರು ವಿರಳ. ಆ ಸಮಯದಲ್ಲಿ ಬರುವ ನಿದ್ರೆಯನ್ನು ತಡೆಯುವುದು ಸುಲಭವೂ ಅಲ್ಲ. ಆದರೆ ಈ ಮಧ್ಯಾಹ್ನದ ನಿದ್ರೆ ನಮ್ಮ ಮೆದುಳಿನ ಆರೋಗ್ಯಕ್ಕೆ ನಿಜವಾಗಿಯೂ ಒಳ್ಳೆಯದೇ? ಅಥವಾ ಇದರಿಂದ ಹಾನಿಯೂ ಇದೆಯೇ? ಎಂಬ ಪ್ರಶ್ನೆಗಳು ಅನೇಕರಲ್ಲಿ ಮೂಡುತ್ತವೆ.
ತಜ್ಞರ ಪ್ರಕಾರ, ಯಾವುದೇ ಒಳ್ಳೆಯ ವಿಷಯವೂ ಮಿತಿಮೀರಿದರೆ ಹಾನಿಕಾರಕವಾಗಬಹುದು. ಮಧ್ಯಾಹ್ನದ ನಿದ್ರೆಯ ವಿಷಯದಲ್ಲೂ ಇದೇ ಅನ್ವಯಿಸುತ್ತದೆ. ಇದರ ಹಿಂದೆ ಇರುವ ವೈಜ್ಞಾನಿಕ ಅಂಶಗಳು ಮತ್ತು ಮೆದುಳಿನ ಮೇಲೆ ಬೀರುವ ಪರಿಣಾಮಗಳನ್ನು ತಿಳಿದುಕೊಳ್ಳುವುದು ಮುಖ್ಯ.
ಮಧ್ಯಾಹ್ನದ ಸಣ್ಣ ನಿದ್ರೆಯ ಪ್ರಮುಖ ಪ್ರಯೋಜನಗಳು
ಮೆದುಳಿಗೆ ಮರುಚೈತನ್ಯ
ಮಧ್ಯಾಹ್ನ 15 ರಿಂದ 20 ನಿಮಿಷಗಳ ಕಾಲ ಕಿರು ನಿದ್ರೆ ಮಾಡಿದರೆ ಮೆದುಳು ಪುನಃ ಚುರುಕುಗೊಂಡಂತೆ ಕಾರ್ಯನಿರ್ವಹಿಸುತ್ತದೆ. ಆಯಾಸ ಕಡಿಮೆಯಾಗಿ ಕಾರ್ಯಕ್ಷಮತೆ ಹೆಚ್ಚುತ್ತದೆ.
ನೆನಪಿನ ಶಕ್ತಿ ವೃದ್ಧಿ
ಕಲಿತ ಮಾಹಿತಿಯನ್ನು ದೀರ್ಘಕಾಲದ ನೆನಪಾಗಿ ಉಳಿಸಿಕೊಳ್ಳಲು ಕಿರು ನಿದ್ರೆ ನೆರವಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಇದು ಹೆಚ್ಚು ಉಪಯುಕ್ತ.
ಏಕಾಗ್ರತೆ ಮತ್ತು ಕಾರ್ಯದಕ್ಷತೆ ಹೆಚ್ಚಳ
ಮಧ್ಯಾಹ್ನದ ವೇಳೆಯಲ್ಲಿ ಸಹಜವಾಗಿ ಉಂಟಾಗುವ ಆಯಾಸವನ್ನು ಕಡಿಮೆ ಮಾಡಿ, ಉಳಿದ ದಿನದ ಕೆಲಸಗಳಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
ಒತ್ತಡದಿಂದ ನಿರಾಳತೆ
ಕಿರು ನಿದ್ರೆಯಿಂದ ದೇಹದಲ್ಲಿನ ಒತ್ತಡ ಹೆಚ್ಚಿಸುವ ಹಾರ್ಮೋನ್‌ಗಳ ಪ್ರಮಾಣ ಕಡಿಮೆಯಾಗಬಹುದು. ಇದರಿಂದ ಮನಸ್ಸು ಹೆಚ್ಚು ಶಾಂತವಾಗಿರುತ್ತದೆ.
ಮೆದುಳಿನ ಆರೋಗ್ಯ ರಕ್ಷಣೆ
ಕೆಲವು ಅಧ್ಯಯನಗಳ ಪ್ರಕಾರ, ನಿಯಮಿತವಾಗಿ ಮಧ್ಯಾಹ್ನ ಕಿರು ನಿದ್ರೆ ಮಾಡುವವರಲ್ಲಿ ಮೆದುಳಿನ ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನವಾಗುವ ಸಾಧ್ಯತೆ ಇದೆ.
ಹೆಚ್ಚು ಹೊತ್ತು ನಿದ್ರೆ ಮಾಡಿದರೆ ಏನಾಗಬಹುದು?
30 ನಿಮಿಷಕ್ಕಿಂತ ಹೆಚ್ಚು ಕಾಲ ನಿದ್ರೆ ಮಾಡಿದರೆ ಗಾಢ ನಿದ್ರೆಯ ಹಂತಕ್ಕೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ನಂತರ ಎದ್ದಾಗ ಸುಸ್ತು, ತಲೆನೋವು ಹಾಗೂ ಮಂಕುತನ ಕಾಣಿಸಬಹುದು. ಇದನ್ನು ‘ಸ್ಲೀಪ್ ಇನರ್ಷಿಯಾ’ ಎಂದು ಕರೆಯಲಾಗುತ್ತದೆ.
ಇದೇ ರೀತಿ ಮಧ್ಯಾಹ್ನ ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ರಾತ್ರಿ ನಿದ್ರೆಗೆ ಅಡ್ಡಿಯಾಗಬಹುದು. ರಾತ್ರಿ ಸಮರ್ಪಕ ನಿದ್ರೆ ಪಡೆದಿದ್ದರೂ ಹಗಲು ವೇಳೆ ಅತಿಯಾದ ನಿದ್ರಾಮತ್ತೆ ಕಾಣಿಸಿಕೊಂಡರೆ ಮಧುಮೇಹ, ಥೈರಾಯ್ಡ್ ಅಥವಾ ಹೃದಯ ಸಂಬಂಧಿತ ಸಮಸ್ಯೆಗಳ ಸೂಚನೆಯಾಗಿರಬಹುದು.
ಎಷ್ಟು ಸಮಯ ನಿದ್ರೆ ಮಾಡಬೇಕು?
ತಜ್ಞರ ಸಲಹೆಯಂತೆ ಮಧ್ಯಾಹ್ನ 15 ರಿಂದ 20 ನಿಮಿಷಗಳ ಕಿರು ನಿದ್ರೆ ಅತ್ಯುತ್ತಮ. ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯೊಳಗೆ ನಿದ್ರೆ ಮಾಡಿದರೆ ಹೆಚ್ಚು ಪ್ರಯೋಜನಕಾರಿ. ಸಂಜೆ 4 ಗಂಟೆಯ ನಂತರ ನಿದ್ರೆ ಮಾಡುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳಿತು.
ನಿದ್ರಾಮತ್ತೆ ಕಡಿಮೆ ಮಾಡಲು ಏನು ಮಾಡಬಹುದು?
ಊಟದ ನಂತರ ಹೆಚ್ಚು ನಿದ್ರಾಮತ್ತೆ ಕಂಡುಬಂದರೆ ತಣ್ಣೀರು ಕುಡಿಯುವುದು, 5 ರಿಂದ 10 ನಿಮಿಷಗಳ ಕಾಲ ನಡೆದು ಬರುವುದು ಹಾಗೂ ಸ್ವಲ್ಪ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ಒಟ್ಟಾರೆ, ಮಧ್ಯಾಹ್ನದ ಕಿರು ನಿದ್ರೆ ಮೆದುಳಿನ ಆರೋಗ್ಯ, ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಆದರೆ ಮಿತಿಮೀರಿದ ನಿದ್ರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದಾದ ಕಾರಣ ಸರಿಯಾದ ಸಮಯದಲ್ಲಿ ಮತ್ತು ಮಿತಿಯಲ್ಲಿ ನಿದ್ರೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ.

