ಉಡುಪಿ : ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅತ್ಯಂತ ಗಂಭೀರ ಸ್ವರೂಪದ ಕೋಕಾ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಕೆಲವು ಸಮಯದಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೋಜ್ ಕುಲಾಲ್ ಅಲಿಯಾಸ್ ಮನೋಜ್ ಕೋಡಿಕೆರೆ ಹಾಗೂ ಚೇತನ್ ಅಲಿಯಾಸ್ ಚೇತು ಪಡೀಲ್ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳ ಪತ್ತೆಗೆ ಸಹಕರಿಸುವ ಬಾತ್ಮೀದಾರರಿಗೆ 50,000 ರೂ. ನಗದು ಬಹುಮಾನವನ್ನೂ ಘೋಷಿಸಲಾಗಿತ್ತು. ಮಾಹಿತಿ ನೀಡಿದ ಸಾರ್ವಜನಿಕ ಬಾತ್ಮೀದಾರರಿಗೆ ಘೋಷಿತ ನಗದು ಬಹುಮಾನದ ಮೊತ್ತವನ್ನು ಪೊಲೀಸ್ ಇಲಾಖೆ ಅಧಿಕೃತವಾಗಿ ಹಸ್ತಾಂತರಿಸಿದೆ.
ಆರೋಪಿ ಚೇತನ್ ಅಲಿಯಾಸ್ ಚೇತು ಪಡೀಲ್ನನ್ನು ಏಪ್ರಿಲ್ 30ರಂದು ದಸ್ತಗಿರಿ ಮಾಡಲಾಗಿತ್ತು. ಪ್ರಮುಖ ಆರೋಪಿ ಮನೋಜ್ ಕೋಡಿಕೆರೆ ಅವರನ್ನು ಜೂನ್ 11ರಂದು ಪೊಲೀಸರು ಬಂಧಿಸಿದ್ದಾರೆ.
ಕ್ರಿಮಿನಲ್ ಹಿಸ್ಟರಿ
ಮನೋಜ್ ಕೋಡಿಕೆರೆ ವಿರುದ್ಧ ಉಡುಪಿ ಜಿಲ್ಲೆಯಲ್ಲಿ 2 ಹಾಗೂ ಮಂಗಳೂರು ನಗರದಲ್ಲಿ 17 ಪ್ರಕರಣ ಸೇರಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ. 3 ಕೊಲೆ ಪ್ರಕರಣ, 5 ಕೊಲೆ ಯತ್ನ, 1 ಅಪಹರಣ ಹಾಗೂ 10 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ದಾಖಲಾಗಿವೆ. ಚೇತನ್ ಪಡೀಲ್ ವಿರುದ್ಧ ಉಡುಪಿಯಲ್ಲಿ 2, ದಕ್ಷಿಣ ಕನ್ನಡದಲ್ಲಿ 2 ಪ್ರಕರಣ, ಮಂಗಳೂರು ನಗರದಲ್ಲಿ 9 ಪ್ರಕರಣ ಸೇರಿ ಒಟ್ಟು 13 ಪ್ರಕರಣ ದಾಖಲಾಗಿದೆ. 2 ಕೊಲೆ ಪ್ರಕರಣ, 2 ಕೊಲೆ ಯತ್ನ, 1 ಅಪಹರಣ, 2 ಮಾದಕ ದ್ರವ್ಯ ಸೇವನೆ ಹಾಗೂ 6 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ದಾಖಲಾಗಿವೆ.

