ಬೆಂಗಳೂರು : ರಕ್ಷಣೆ ನೀಡಬೇಕಿದ್ದ ತಂದೆಯೇ ತನ್ನ 16 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತಾಯಿ ಸೇರಿದಂತೆ ಕುಟುಂಬದ ಬೆಂಬಲವಿಲ್ಲದಿದ್ದರೂ ಧೈರ್ಯದಿಂದ ಕಾನೂನು ಹೋರಾಟ ನಡೆಸಿದ ಬಾಲಕಿಗೆ ಕೊನೆಗೂ ನ್ಯಾಯ ದೊರೆತಿದೆ.
ಬಿಹಾರ ಮೂಲದ ದಿನಗೂಲಿ ಕಾರ್ಮಿಕನಾಗಿರುವ ಆರೋಪಿ ತನ್ನ ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಉತ್ತರ ಬೆಂಗಳೂರಿನಲ್ಲಿ ವಾಸವಾಗಿದ್ದ. ಸಂತ್ರಸ್ತೆ ಆತನ ಹಿರಿಯ ಮಗಳಾಗಿದ್ದು, ಮದುವೆಗೆ ಒತ್ತಾಯಿಸುತ್ತಿದ್ದ ತಂದೆಯಿಂದ ದೂರವಿರಲು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಳು.
2023ರ ಜೂನ್‌ನಲ್ಲಿ ಕುಟುಂಬದ ಸದಸ್ಯರು ಬಿಹಾರಕ್ಕೆ ತೆರಳಿದ್ದ ವೇಳೆ, ಬಳಿಕ ಬೆಂಗಳೂರಿಗೆ ಮರಳಿದ ಮಗಳ ಮೇಲೆ ಆರೋಪಿ ಮದ್ಯದ ಅಮಲಿನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಬಾಲಕಿ ಮನೆಯಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆ ಸೇರಿ ದೂರು ದಾಖಲಿಸಿದ್ದಳು.
ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಬಾಲಕಿಯನ್ನು ಸುರಕ್ಷತೆಗಾಗಿ ಮಹಿಳಾ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ತಂದೆಯ ವಿರುದ್ಧ ದೂರು ನೀಡಿದ್ದಕ್ಕಾಗಿ ತಾಯಿಯೇ ಮಗಳನ್ನು ಗದರಿಸಿದ್ದು, ಆರೋಪಿಯ ಪರ ನಿಂತಿದ್ದಾಳೆ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೂರು ವರ್ಷಗಳ ಕಾಲ ಧೈರ್ಯದಿಂದ ಕಾನೂನು ಹೋರಾಟ ನಡೆಸಿದ ಸಂತ್ರಸ್ತೆಯ ಪರವಾಗಿ ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿಗೆ 20 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ ₹1.10 ಲಕ್ಷ ದಂಡ ವಿಧಿಸಿದೆ.
ಪ್ರಸ್ತುತ 19 ವರ್ಷದ ಯುವತಿಯಾಗಿರುವ ಸಂತ್ರಸ್ತೆ ಟೈಲರಿಂಗ್ ಕೆಲಸ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.

