ಸಮಸ್ತ ವೈದ್ಯ ಸಂಕುಲದ ಆರಾಧ್ಯ ದೈವ ಶ್ರೀ ಭಗವಾನ್ ಧನ್ವಂತರಿಯ ಜಯಂತಿಯನ್ನು ಪ್ರತಿ ವರುಷ ದೀಪಗಳ ಹಬ್ಬ ದೀಪಾವಳಿಯ ಮೂರು ದಿನ ಮುಂಚೆ ಬರುವ ದನ್ ತೇರಸ್ / ಧನತ್ರಯೋದಶಿ ಸಮಯದಲ್ಲಿ ಆಚರಿಸಲಾಗುತ್ತದೆ. ಭಗವಾನ್ ಧನ್ವಂತರಿ ಮಹಾವಿಷ್ಣು ದಿನ ಅವತಾರವಾಗಿದ್ದು, ಸಮುದ್ರ ಮಥನದ ಸಮಯದಲ್ಲಿ ಧನ್ವಂತರಿ ದೇವರ ಅವತಾರವಾಯಿತು.
ಬಾಲಕಾಂಡ ಮತ್ತು ಭಾಗವತ ಪುರಾಣದ ಪ್ರಕಾರ ಸಮುದ್ರ ಮಥನದ ಸಮಯದಲ್ಲಿ ದೇವಾಸುರರು ಮಂದಾರ ಪರ್ವತವನ್ನು ಕಡೆಗೋಲಾಗಿ ಮತ್ತು ವಾಸುಕಿಯನ್ನು ಹಗ್ಗವಾಗಿ ಮಥನ ಮಾಡಿದಾಗ ಆದಿ ದೈವ, ಅಯುರ್ವೇದದ ಪ್ರವರ್ತಕ ಧನ್ವಂತರಿ ದೇವನ ಅವತಾರವಾಯಿತು. ಪ್ರಾಚೀನ ಸಂಸ್ಕೃತದ ವಿಷ್ಣು ಧರ್ಮೋತ್ತರದ ಪ್ರಕಾರ ಭಗವಾನ್ ಧನ್ವಂತರಿ ಬಹಳ ಆಕರ್ಷಕ ಸುರದ್ರೂಪಿ ಸುಂದರ ಪುರುಷ ಎಂದು ವರ್ಣಿಸಲಾಗಿದೆ. ಧನ್ವಂತರಿ ದೇವರಿಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಶಂಖ ಮತ್ತೊಂದು ಕೈಯಲ್ಲಿ ಚಕ್ರ, ಇನ್ನೊಂದು ಕೈಯಲ್ಲಿ ಜಿಗಣೆ, ಮಗದೊಂದು ಕೈಯಲ್ಲಿ ಅಮೃತ ಕಲಷವಿದೆ.
ಕಾಶಿಯ ರಾಜ ದಿವೋದಾಸ ಧನ್ವಂತರಿ ಎಂಬ ಹೆಸರಿನಿಂದ ವೈದ್ಯ ಲೋಕದಲ್ಲಿ ಪ್ರಸಿದ್ಧವಾಗಿದ್ದಾರೆ. ಆಯುರ್ವೇದ ಶಸ್ತ್ರಚಿಕಿತ್ಸೆಯ ಪಿತಾಮಹನಾದ ಸುಶ್ರುತಾಚಾರ್ಯರ ಗುರು ಭಗವಾನ್ ಧನ್ವಂತರಿ ಎಂಬ ಪುರಾಣ ಗ್ರಂಥಗಳಲ್ಲಿ ಇದೆ. ಎಲ್ಲಾ ಆಯುರ್ವೇದ ವೈದ್ಯರು ಅತಿಯಾಗಿ ಗೌರವಿಸುವ ಧನ್ವಂತರಿ ನಿಘಂಟಿನಲ್ಲಿ ನೂರಾರು ದಿಡಮೂಲಿಕೆಗಳ ಬಗ್ಗೆ ಉಲ್ಲೇಖವಿದೆ ಮತ್ತು ಅದರ ಲೇಖಕ ಭಗವಾನ್ ಧನ್ವಂತರಿಯೇ ಆಗಿರುತ್ತಾನೆ. ಸಾಮ್ರಾಟ್ ವಿಕ್ರಮಾದಿತ್ಯ ಉಲ್ಲೇಖಿಸಿದ ನವರತ್ನಗಳಲ್ಲಿ ಧನ್ವಂತರಿ ದೇವನೂ ಸೇರಿರುತ್ತಾನೆ.
ಆರೋಗ್ಯ ಭಾರತಿ ಒಂದು ರಾಷ್ಪ್ರೀಯ ಮಟ್ಟದ ಸಂಪೂರ್ಣ ಆರೋಗ್ಯ ರಕ್ಷಣಾ ಸ್ವಯಂ ಸೇವಾ ಸಂಸ್ಥೆ ಆಗಿದ್ದು, ೨೦೦೨ ರ ನವೆಂಬರ್ ೨ ರಂದು ಕೇರಳದ ಕೊಚ್ಚಿನ್ ನಗರದಲ್ಲಿ ಆರಂಭವಾಯಿತು. ಇದರ ಮುಖ್ಯ ಉದ್ದೇಶ ಜನರಲ್ಲಿ ಆರೋಗ್ಯದ ಬಗ್ಗೆ ಮತ್ತು ಆರೋಗ್ಯ ಪೂರ್ಣ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಬಗ್ಗೆ ಜನಜಾಗ್ರತಿ ಮೂಡಿಸುವ ಏಕಮೇವ ಸದುದ್ದೇಶ ಹೊಂದಿರುತ್ತದೆ.
ಆರೋಗ್ಯ ಭಾರತೀಯ ಎಲ್ಲಾ ಕಾರ್ಯಕ್ರಮಗಳನ್ನು ಭಗವಾನ್ ಧನ್ವಂತರಿಯ ಪ್ರಾಥನೆಯೊಂದಿಗೆ ಪ್ರಾರಂಭ ಮಾಡಲಾಗುತ್ತದೆ.
“ನಮಾಮಿ ಧನ್ವಂತರಿ ಆದಿ ದೇವಂ ಸುರಾಸುರೈ: ವಂದಿತ ಪಾದ ಪದ್ಮಂ
ಲೋಕೇ ಜರಾರುಗ್ಭಯ ಮೃತ್ಯುನಾಶಂ ಧಾತಾರಂ ಈಶ್ಮಾ ವಿವಿಧ ಔಷಧೀಯಂ”
ಧನ್ವಂ ಎಂದರೆ ಕಾಯಿಲೆಗಳು, ರೋಗ ರುಜಿನ, ಕಷ್ಟ ಕಾರ್ಪಣ್ಯ ಮತ್ತು ಅಂತರಿ ಎಂದರೆ ಧ್ವಂಸ ಹೀಗಾಗಿ ಧನ್ವಂತರಿ ಅಂದರೆ ರೋಗರುಜಿನಗಳು ಮತ್ತು ಕಷ್ಟಕಾರ್ಪಣ್ಯಗಳನ್ನು ಹೋಗಲಾಡಿಸುವವ ಎಂಬರ್ಥ.
ಧನ್ವಂತರಿ ಮಹಾ ಮಂತ್ರ ಹೀಗಿದೆ.
ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಷ ಹಸ್ತಾಯ ಸರ್ವಾಮಯ ವಿನಾಶಾಯ ತೈಲೋಕ್ಯನಾಥಾಯ ಶ್ರೀ ಮಹಾವಿಷ್ಣುವೇ ಸ್ವಾಹ.
ಮೂರು ಸಾವಿರ ವರುಷಗಳ ಹಿಂದೆ ಕಾಶಿಯ ಗಂಗಾನದಿಯ ತಟದಲ್ಲಿ ಹೇರಳವಾಗಿದ್ದ “ಕಾಶ’ ಸಸ್ಯದ ಮೊನಚಿನ ತುದಿಗಳನ್ನು ಬಳಸಿ ಗಂಗೆಯಲ್ಲಿ ತೇಲಿಬಿಟ್ಟ ಶವಗಳನ್ನು ಛೇದಿಸಿ ಶವಛ್ಘೇಧನ ಮಾಡಿ, ಇಡಿಯ ದೇಹದ ಬಿಡಿ ಬಿಡಿ ಭಾಗಗಳನ್ನು ಬಿಡದೆ ಗುರುತಿಸಿ ಅಂತಹ ಅಂಗಾಂಗಳಿಗೆ ಹೆಸರು ನೀಡಿ, ಅವುಗಳ ಸಹಜ ಮತ್ತು ವಿಕೃತ ಸ್ಥಿತಿ ಗುರುತಿಸಿ ವೈದ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ ವೈದ್ಯಲೋಕದ ಅನಭಿಷಿಕ್ತ ದೊರೆ, ಅಲೌಕಿಕ ದೇವಮಾನವ, ಮಹಾ ವಿಷ್ಣುವಿನ ಅಪರಾವತಾರ, ಕಾಶಿ ರಾಜ ದಿವೋದಾಸ ‘ಭಗವಾನ್ ಧನ್ವಂತರಿ’ ದೇವರ ಪಾದಾರಾದಿಂದಗಳಿಗೆ ನಮೋನಮಃ:”.
ಈ ಧನ್ವಂತರಿ ಜಯಂತಿಯ ದಿನದಂದು ಲೋಕದ ಸಮಸ್ತ ಜನರಿಗೆ ಆರೋಗ್ಯ ಮತ್ತು ನೆಮ್ಮದಿ ಕರುಣಿಸಲಿ ಎಂದು ಹಾರೈಸೋಣ ಮತ್ತು ಪ್ರಾರ್ಥಿಸೋಣ – ಜೈ ಧನ್ವಂತರಿ
ಡಾ ಮುರಲೀ ಮೋಹನ ಚೂಂತಾರು

