ನಿಲ್ಲಿಸಿದ ವಾಹನದ ಮೇಲೆ ಮರ ಬಿದ್ದರೆ ಅದು ‘ಮೋಟಾರ್ ಅಪಘಾತ’ ಅಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು..!

0
92

ನವದೆಹಲಿ : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನದ ಮೇಲೆ ಮರ ಅಥವಾ ಅದರ ಕೊಂಬೆ ಬಿದ್ದರೆ ಅದನ್ನು ಮೋಟಾರು ವಾಹನ ಕಾಯ್ದೆಯಡಿ ‘ಮೋಟಾರ್ ಅಪಘಾತ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ಘಟನೆಗಳಲ್ಲಿ ವಾಹನದ ಯಾವುದೇ ಸಕ್ರಿಯ ಪಾತ್ರ ಇರುವುದಿಲ್ಲ ಎಂಬ ಕಾರಣವನ್ನು ನ್ಯಾಯಾಲಯ ಉಲ್ಲೇಖಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ಮೋಟಾರು ವಾಹನದಿಂದ ನೇರವಾಗಿ ಅಪಘಾತ ಸಂಭವಿಸದ ಕಾರಣ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 166ರ ಅಡಿಯಲ್ಲಿ ಪರಿಹಾರ ಕೋರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಆದರೆ, 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೆ.ಕೆ. ಉಮೇಶ್ ಕುಮಾರ್ ಅವರ ಪರಿಸ್ಥಿತಿಯನ್ನು ಪರಿಗಣಿಸಿ, ನ್ಯಾಯಾಲಯ ತನ್ನ ವಿಶೇಷ ಅಧಿಕಾರವಾದ ವಿಧಿ 142 ಅನ್ನು ಬಳಸಿ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.

ಜೂನ್ 23, 2007ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಭಾರಿ ಮಳೆಯಿಂದ ರಕ್ಷಣೆ ಪಡೆಯಲು ಆಟೋವನ್ನು ಮರದ ಕೆಳಗೆ ನಿಲ್ಲಿಸಲಾಗಿತ್ತು. ಈ ವೇಳೆ ಹಳೆಯ ಮರದ ಕೊಂಬೆಯೊಂದು ಮುರಿದು ಆಟೋ ಮೇಲೆ ಬಿದ್ದ ಪರಿಣಾಮ ಪ್ರಯಾಣಿಕ ಉಮೇಶ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು.

ಈ ಪ್ರಕರಣದಲ್ಲಿ ಮೊದಲು ಪರಿಹಾರ ನಿರಾಕರಿಸಲಾಗಿದ್ದರೂ, ಬಳಿಕ ಕರ್ನಾಟಕ ಹೈಕೋರ್ಟ್ 17.10 ಲಕ್ಷ ರೂ. ಪರಿಹಾರ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ಅದನ್ನು 25 ಲಕ್ಷ ರೂ.ಗಳಿಗೆ ಹೆಚ್ಚಿಸಿ, ನಾಲ್ಕು ವಾರಗಳೊಳಗೆ ಪಾವತಿಸುವಂತೆ ಸೂಚಿಸಿದೆ.

ನ್ಯಾಯಾಲಯವು, ನಗರಗಳಲ್ಲಿ ಪ್ರತಿಯೊಂದು ಮರದ ಮೇಲೆಯೂ ನಿರಂತರ ನಿಗಾ ಇಡುವುದು ಅಸಾಧ್ಯವಾಗಿದ್ದು, ಮುನ್ನೆಚ್ಚರಿಕೆ ಹೆಸರಿನಲ್ಲಿ ಎಲ್ಲಾ ಮರದ ಕೊಂಬೆಗಳನ್ನು ಕತ್ತರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೆ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಯಾವುದೇ ನೆರವಿಲ್ಲದೆ ಬಿಡುವುದು ನ್ಯಾಯದ ತತ್ವಗಳಿಗೆ ವಿರುದ್ಧ ಎಂದು ಕೋರ್ಟ್ ಹೇಳಿದೆ.

LEAVE A REPLY

Please enter your comment!
Please enter your name here