ರೀಲ್ಸ್ ಹುಚ್ಚಿಗೆ ಮತ್ತೊಂದು ಬಲಿ : ವಿಡಿಯೋ ಮಾಡುವಾಗ ಸಮುದ್ರದ ಅಲೆಗೆ ಕೊಚ್ಚಿಹೋದ ಯುವಕ..!

0
70

ಕಾರವಾರ : ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಮತ್ತೊಂದು ಜೀವವನ್ನು ಬಲಿತೆಗೆದುಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ ಜೀವನ್ ಭಟ್ಟರಾಯಿ (26) ಎಂಬ ಯುವಕ ಸಮುದ್ರದ ಅಲೆಗೆ ಕೊಚ್ಚಿಹೋಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಜೀವನ್ ಭಟ್ಟರಾಯಿ ತನ್ನ ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಕುಮಟಾಕ್ಕೆ ಆಗಮಿಸಿದ್ದು, ಖಾಸಗಿ ರೆಸಾರ್ಟ್‌ನಲ್ಲಿ ಕಳೆದ ಮೂರು ದಿನಗಳಿಂದ ತಂಗಿದ್ದರು. ಭಾನುವಾರ ಕಡ್ಲೆ ಬೀಚ್‌ಗೆ ತೆರಳಿದ್ದ ಸ್ನೇಹಿತರ ತಂಡ ರೀಲ್ಸ್ ವಿಡಿಯೋ ಚಿತ್ರೀಕರಣಕ್ಕಾಗಿ ಸಮುದ್ರಕ್ಕಿಳಿದಿತ್ತು.

ರೀಲ್ಸ್ ಚಿತ್ರೀಕರಣ ಮುಗಿದ ಬಳಿಕ ಸ್ನೇಹಿತರು ಕರೆಯತ್ತ ಹಿಂದಿರುಗಿದರೆ, ಜೀವನ್ ಮಾತ್ರ ಸಮುದ್ರದಲ್ಲಿ ಆಟವಾಡುತ್ತಲೇ ಇದ್ದನು. ಆತ ನಂತರ ಬರುತ್ತಾನೆ ಎಂದು ಭಾವಿಸಿ ಸ್ನೇಹಿತರು ಮುಂದೆ ತೆರಳಿದ್ದು, ಈ ವೇಳೆ ಏಕಾಏಕಿ ಬಂದ ಪ್ರಬಲ ಅಲೆ ಜೀವನ್‌ನನ್ನು ಸಮುದ್ರದೊಳಗೆ ಎಳೆದುಕೊಂಡು ಹೋಗಿದೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಕರಾವಳಿ ಕಾವಲುಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸ್ಥಳಕ್ಕೆ ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಖಾದರ್ ಬಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಇತ್ತೀಚಿನ ದಿನಗಳಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮತ್ತು ಸೆಲ್ಫಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಯುವಜನರು ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here