ಯುವವಾಹಿನಿ ಮೂಡುಬಿದಿರೆ ಘಟಕದಿಂದ ಕಲೆ ಸಾಹಿತ್ಯ ಭಜನಾ ಮತ್ತು ನೃತ್ಯ ತಂಡಗಳ ರಚನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0
28

ಮೂಡುಬಿದಿರೆ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ಕಲೆ, ಸಾಹಿತ್ಯ, ಭಜನಾ ಮತ್ತು ನೃತ್ಯ ತಂಡಗಳ ರಚನೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ 21-06-2026ರ ಭಾನುವಾರದಂದು ಯಶಸ್ವಿಯಾಗಿ ನಡೆಯಿತು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಅರ್ಥಪೂರ್ಣ ಹಾಗೂ ಪ್ರೇರಣಾದಾಯಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಕಾರ್ಯಕ್ರಮವನ್ನು ಪೂರ್ಣಿಮ ಕೋಟ್ಯಾನ್ ಅವರು ನಿರೂಪಿಸಿದರು ಹಾಗೂ ಮಾಜಿ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ. ಅವರು ಸ್ವಾಗತಿಸಿದರು. ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ಕೋಟ್ಯಾನ್ ಮಾರೂರು ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿ ಮೂಲಕ ಕಾರ್ಯಕ್ರಮದ ಉದ್ದೇಶ ಹಾಗೂ ಕಲೆ, ಸಾಹಿತ್ಯ, ಭಜನಾ ಮತ್ತು ನೃತ್ಯ ತಂಡಗಳ ರಚನೆಯ ಅಗತ್ಯತೆ, ಮುಂದಿನ ಹಂತದ ಕಾರ್ಯಯೋಜನೆ ಹಾಗೂ ತಂಡಗಳ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರ್.ಜೆ. ಹಾಗೂ ಸಾಹಿತಿಗಳಾದ ಶ್ರೀ ವಿನೋದ್ ಕುಂಪಲ ಅವರು ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಸಮಯ ಪ್ರಜ್ಞೆಯೊಂದಿಗೆ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ನಿರಂತರ ಸಾಧನೆಯತ್ತ ಹೆಜ್ಜೆಯಿಡಬೇಕೆಂದು ಕರೆ ನೀಡಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಶುಭಕರ ಪೂಜಾರಿ ವೇಣೂರು ಅವರು ಸಂಘಟನೆಯ ಚಟುವಟಿಕೆಗಳು ಹಾಗೂ ಯುವಜನರ ಪಾತ್ರದ ಕುರಿತು ಮಾತನಾಡಿದರು. ಸನ್ಮಾನಿತರಾದ ಶ್ರೀ ಸುಧೀಂದ್ರ ಜೆ. ಶಾಂತಿ ಅವರೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಯುವವಾಹಿನಿಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸಮಾಜಕಾರ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಸುಧೀಂದ್ರ ಜೆ. ಶಾಂತಿ, ಅಗ್ನಿವೀರ್ ಜೆಡಿ ಹುದ್ದೆಗೆ ಆಯ್ಕೆಯಾದ ಶ್ರೀ ವಿರಾಜ್ ಪೂಜಾರಿ ಪಣಪಿಲ, ಭಜನಾ ಕ್ಷೇತ್ರದ ಕು. ಹರ್ಷಾ ಯು. ಕೋಟ್ಯಾನ್, ನೃತ್ಯ ಹಾಗೂ ಕಲೆ ಕ್ಷೇತ್ರದ ಶ್ರೀ ಕೀರ್ತನ್ ಎಸ್. ಶಾಂತಿ ಹಾಗೂ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕು. ಪೂರ್ಣಿಮಾ ಕೋಟ್ಯಾನ್ ಮಾರ್ನಾಡು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಧಕರ ಮಾತುಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಇದೇ ವೇಳೆ ನೂತನ ಸದಸ್ಯರ ಸೇರ್ಪಡೆಯೂ ನಡೆಯಿತು. ಕಾರ್ಯಕ್ರಮದಲ್ಲಿ ಯುವಸ್ಪಂದನ ಯೋಜನೆಯ ಅಧ್ಯಕ್ಷರಾದ ನವಾನಂದ ಮೂಡುಬಿದಿರೆ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶ್ರೀಮತಿ ಪ್ರತಿಭಾ ಸುರೇಶ್, ಕೋಶಾಧಿಕಾರಿಯಾದ ಶ್ರೀಮತಿ ಜಯಶೀಲಾ ಪೂಜಾರಿ ಹಾಗೂ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.
ಅಧ್ಯಕ್ಷರಾದ ಶ್ರೀ ಗಿರೀಶ್ ಕೋಟ್ಯಾನ್ ಅವರು ಧನ್ಯವಾದ ಅರ್ಪಿಸಿ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.

LEAVE A REPLY

Please enter your comment!
Please enter your name here