ಮೂಡುಬಿದಿರೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 2025-26ನೇ ಸಾಲಿನ ವಿವಿಧ ಯೋಜನೆಗಳ ಅನುದಾನದಡಿ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ಉಮಾನಾಥ್ ಎ. ಕೋಟ್ಯಾನ್ ಅವರು ಮಂಗಳವಾರ ವಿತರಿಸಿದರು.
ಮೂಡುಬಿದಿರೆಯ ತಾಲೂಕು ಆಡಳಿತ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಹಸ್ತಾಂತರಿಸಿದ ಶಾಸಕ ಉಮಾನಾಥ್ ಎ. ಕೋಟ್ಯಾನ್, ಸರ್ಕಾರದ ಸ್ವಯಂ ಉದ್ಯೋಗ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಕರೆ ನೀಡಿದರು.
ಈ ಯೋಜನೆಯ ಮೂಲಕ ಹಿಂದುಳಿದ ವರ್ಗಗಳ ಅರ್ಹ ಫಲಾನುಭವಿಗಳಿಗೆ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದ್ದು, ಜೀವನೋಪಾಯವನ್ನು ಸುಧಾರಿಸಿಕೊಳ್ಳಲು ಸರ್ಕಾರ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳು, ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

