ಪ್ರೇಮ ವಿವಾದಕ್ಕೆ ತಿರುವು ; ಲಾಂಗ್ ದಾಳಿಗೆ ಕೈ ಕಳೆದುಕೊಂಡ ಯುವಕ..!

0
140

ಚಿಕ್ಕಮಗಳೂರು : ಮಹಿಳೆಯೊಬ್ಬಳ ವಿಚಾರವಾಗಿ ಇಬ್ಬರು ಪುರುಷರ ನಡುವೆ ಉಂಟಾದ ವೈಮನಸ್ಸು ಭೀಕರ ತಿರುವು ಪಡೆದು, ಯುವಕನೊಬ್ಬ ತನ್ನ ಕೈ ಹಸ್ತವನ್ನೇ ಕಳೆದುಕೊಂಡ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ.

ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಅರುಣ್ (35) ಎಂದು ಗುರುತಿಸಲಾಗಿದ್ದು, ಹಲ್ಲೆ ನಡೆಸಿದ ಆರೋಪದ ಮೇಲೆ ಶೇಷಗಿರಿ (40) ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಮಾಹಿತಿಯ ಪ್ರಕಾರ, ಅಡಿಗೆಬೈಲು ಗ್ರಾಮದ ನಾಗರತ್ನ ಎಂಬ ಮಹಿಳೆ ಪತಿಯಿಂದ ದೂರವಾಗಿ ವಾಸಿಸುತ್ತಿದ್ದರು. ಈಕೆಯ ವಿಚಾರವಾಗಿ ಶೇಷಗಿರಿ ಹಾಗೂ ಅರುಣ್ ನಡುವೆ ಕಳೆದ ಕೆಲವು ದಿನಗಳಿಂದ ಭಿನ್ನಾಭಿಪ್ರಾಯ ಮತ್ತು ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿದ್ದು, ಅದು ಹಲ್ಲೆಗೆ ಕಾರಣವಾಗಿದೆ ಎನ್ನಲಾಗಿದೆ.

ಜಗಳದ ವೇಳೆ ಸಿಟ್ಟಿಗೆದ್ದ ಶೇಷಗಿರಿ ಲಾಂಗ್‌ನಿಂದ ಅರುಣ್ ಮೇಲೆ ದಾಳಿ ನಡೆಸಿದ್ದಾನೆ. ಜೀವ ಉಳಿಸಿಕೊಳ್ಳಲು ಅರುಣ್ ಕೈಯನ್ನು ಅಡ್ಡ ಹಿಡಿದಾಗ, ಬಲವಾಗಿ ಬಿದ್ದ ಲಾಂಗ್ ಏಟಿಗೆ ಆತನ ಕೈ ಹಸ್ತ ಸಂಪೂರ್ಣವಾಗಿ ಕತ್ತರಿಸಿಕೊಂಡಿದೆ ಎಂದು ತಿಳಿದುಬಂದಿದೆ.

ತೀವ್ರ ರಕ್ತಸ್ರಾವದಿಂದ ಗಾಯಗೊಂಡ ಅರುಣ್ ಅವರನ್ನು ಸ್ಥಳೀಯರು ತಕ್ಷಣ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here