ದಾಲ್ಮಿಯಾ ಭಾರತ್ ಫೌಂಡೇಶನ್‌ನಿಂದ ಉಚಿತ ಆರೋಗ್ಯ ಶಿಬಿರ: 500ಕ್ಕೂ ಹೆಚ್ಚು ಜನರಿಗೆ ಉಚಿತ ತಪಾಸಣೆ, ಔಷಧಿ ವಿತರಣೆ

0
15

ಬೆಳಗಾವಿ : ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ತಲುಪಿಸುವ ನಿಟ್ಟಿನಲ್ಲಿ ದಾಲ್ಮಿಯಾ ಭಾರತ್ ಸಿಮೆಂಟ್ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ವಿಭಾಗವಾದ ದಾಲ್ಮಿಯಾ ಭಾರತ್ ಫೌಂಡೇಶನ್ (ಡಿಬಿಎಫ್) ವತಿಯಿಂದ ತಾಲೂಕಿನ ಯಾದವಾಡ ಗ್ರಾಮದಲ್ಲಿ ಬೃಹತ್ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಘಟಪ್ರಭದ ಜೆ.ಜಿ. ಸಹಕಾರಿ ಆಸ್ಪತ್ರೆ ಹಾಗೂ ಯಾದವಾಡದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಈ ಶಿಬಿರದಲ್ಲಿ ಸುತ್ತಮುತ್ತಲಿನ ಹಳ್ಳಿಗಳ 500ಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡು ಉಚಿತ ತಪಾಸಣೆ ಹಾಗೂ ಔಷಧಿಗಳ ಸೌಲಭ್ಯ ಪಡೆದುಕೊಂಡರು.

ಗ್ರಾಮೀಣ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಮತ್ತು ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ಹೆಚ್‌ಆರ್ ಮುಖ್ಯಸ್ಥ ಶರದ್ ಹುರಕತ್ ಅವರು ಶಿಬಿರದ ಉಸ್ತುವಾರಿ ವಹಿಸಿದ್ದರು. ಯಾದವಾಡ ಸೇರಿದಂತೆ ನೆರೆಯ ಕಾಮನಕಟ್ಟಿ, ಕೊಪ್ಪದಟ್ಟಿ, ಗುಳಗಂಜಿ ಕೊಪ್ಪ ಹಾಗೂ ಗಿರಿಸಾಗರ ಗ್ರಾಮಗಳ ನೂರಾರು ಸಂಖ್ಯೆಯ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.

ಜೆ.ಜಿ. ಸಹಕಾರಿ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಸಾರ್ವಜನಿಕರ ಸಮಗ್ರ ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಸಲಹೆ-ಮಾರ್ಗದರ್ಶನ ನೀಡಿತು. ಇದೇ ವೇಳೆ ವೈದ್ಯರ ಚೀಟಿ ಆಧರಿಸಿ ರೋಗಿಗಳಿಗೆ ಉಚಿತವಾಗಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.

ಸಂಸ್ಥೆಯ ಬೆಳಗಾವಿ ಘಟಕದ ಮುಖ್ಯಸ್ಥ ಪ್ರಭಾತ್ ಕುಮಾರ್ ಸಿಂಗ್ ಮಾತನಾಡಿ, “ಸುಲಭವಾಗಿ ಆರೋಗ್ಯ ಸೇವೆಗಳು ಸಿಗುವಂತಾಗುವುದು ಸಮುದಾಯದ ಯೋಗಕ್ಷೇಮದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಮತ್ತು ಅಗತ್ಯ ವೈದ್ಯಕೀಯ ನೆರವು ನೀಡಲು ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲೂ ಇಂತಹ ಜನಪರ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ದಾಲ್ಮಿಯಾ ಭಾರತ್ ಸಂಸ್ಥೆ ಬದ್ಧವಾಗಿದೆ” ಎಂದರು.

ದಾಲ್ಮಿಯಾ ಭಾರತ್ ಫೌಂಡೇಶನ್ ತಾನು ಕಾರ್ಯನಿರ್ವಹಿಸುವ ಭಾಗಗಳಲ್ಲಿ ಆರೋಗ್ಯ, ಶಿಕ್ಷಣ, ಜೀವನೋಪಾಯದ ಸುಧಾರಣೆ, ಮಹಿಳಾ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆಯಂತಹ ಹತ್ತಾರು ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಲು ನಿರಂತರವಾಗಿ ಶ್ರಮಿಸುತ್ತಿದೆ.

LEAVE A REPLY

Please enter your comment!
Please enter your name here