ಮಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision–SIR) ಪ್ರಕ್ರಿಯೆಗೆ ಮಂಗಳವಾರ (ಜೂನ್ 30)ದಿಂದ ಚಾಲನೆ ದೊರೆಯಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ರಾಜ್ಯದಾದ್ಯಂತ 59,050ಕ್ಕೂ ಹೆಚ್ಚು ಬಿಎಲ್‌ಒಗಳು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದು, 2026ರ ಮೇ 12ರ ಅಂಕಿ-ಅಂಶಗಳ ಪ್ರಕಾರ 5,55,74,064 ಮತದಾರರ ಮಾಹಿತಿಯನ್ನು ವಿಶೇಷ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ.
ಮನೆಗೆ ಭೇಟಿ ನೀಡುವ ಅಧಿಕಾರಿಗಳು ಮತದಾರರಿಗೆ ಎರಡು ಎನ್ಯುಮರೇಷನ್ ಫಾರ್ಮ್‌ಗಳನ್ನು ನೀಡಲಿದ್ದು, ಅವುಗಳನ್ನು ಭರ್ತಿ ಮಾಡಿ ಸಹಿ ಮಾಡಿದ ಬಳಿಕ ಒಂದು ಪ್ರತಿಯನ್ನು ದಾಖಲೆಯಾಗಿ ಮತದಾರರಿಗೆ ಹಿಂತಿರುಗಿಸಲಾಗುತ್ತದೆ. ಮತ್ತೊಂದು ಪ್ರತಿಯನ್ನು ಅಧಿಕಾರಿಗಳು ಪಡೆದು ಡಿಜಿಟಲ್ ರೂಪದಲ್ಲಿ ಸ್ಕ್ಯಾನ್ ಮಾಡಿ ಚುನಾವಣಾ ಆಯೋಗದ ದಾಖಲೆಯಲ್ಲಿ ಸಂಗ್ರಹಿಸಲಿದ್ದಾರೆ.
ಈ ವಿಶೇಷ ಪರಿಷ್ಕರಣೆಯ ವೇಳೆ ಹೊಸ ಮತದಾರರ ಹೆಸರು ಸೇರ್ಪಡೆ, ಮೃತರಾದವರ ಹೆಸರು ಕೈಬಿಡುವುದು, ಸ್ಥಳಾಂತರಗೊಂಡವರ ವಿವರ ತಿದ್ದುಪಡಿ, ಎರಡು ಕಡೆ ಹೆಸರು ಹೊಂದಿರುವವರ ಹೆಸರನ್ನು ಒಂದು ಕಡೆ ಮಾತ್ರ ಉಳಿಸುವುದು ಹಾಗೂ ಮತದಾರರ ಗುರುತಿನ ಚೀಟಿಯಲ್ಲಿರುವ ಹೆಸರು, ವಿಳಾಸ ಸೇರಿದಂತೆ ಇತರ ದೋಷಗಳನ್ನು ಸರಿಪಡಿಸುವ ಅವಕಾಶ ಕಲ್ಪಿಸಲಾಗಿದೆ.
ಆಕ್ಷೇಪಣೆ ಸಲ್ಲಿಸಲು ಅವಕಾಶ
ಬಿಎಲ್‌ಒಗಳು ಮಾಹಿತಿ ಸಂಗ್ರಹಿಸಿದ ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಪಟ್ಟಿಯಲ್ಲಿ ಹೆಸರು ಅಥವಾ ವಿವರಗಳಲ್ಲಿ ದೋಷಗಳಿದ್ದರೆ ನಿಗದಿತ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಹೆಸರು ಕೈಬಿಟ್ಟಿದ್ದರೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಮತ್ತೆ ಸೇರ್ಪಡೆ ಮಾಡಿಸಿಕೊಳ್ಳಬಹುದು. ಅಗತ್ಯವಿದ್ದರೆ ಜಿಲ್ಲಾಧಿಕಾರಿ ಹಂತದ ಮೇಲ್ಮನವಿ ಪ್ರಾಧಿಕಾರ ಹಾಗೂ ನಂತರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.
ವಿವರಗಳಲ್ಲಿ ವ್ಯತ್ಯಾಸವಿದ್ದರೆ ನೋಟಿಸ್
2025 ಮತ್ತು 2002ರ ಮತದಾರರ ಪಟ್ಟಿಯಲ್ಲಿರುವ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಪೋಷಕರ ಮಾಹಿತಿ ಲಭ್ಯವಿಲ್ಲದಿದ್ದರೆ ಸಂಬಂಧಪಟ್ಟ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಆದರೆ ನೋಟಿಸ್ ನೀಡಿದ ತಕ್ಷಣ ಹೆಸರು ಕೈಬಿಡುವುದಿಲ್ಲ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕ ಅರ್ಹರ ಹೆಸರನ್ನು ಕರಡು ಪಟ್ಟಿಯಲ್ಲೇ ಮುಂದುವರಿಸಲಾಗುತ್ತದೆ.
ಎಸ್‌ಐಆರ್ ವೇಳಾಪಟ್ಟಿ
- ಜೂನ್ 30 – ಜುಲೈ 29: ಮನೆ ಮನೆಗೆ ಭೇಟಿ, ಫಾರ್ಮ್ ವಿತರಣೆ ಮತ್ತು ಸಂಗ್ರಹಣೆ
- ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ
- ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ
- ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿ ಪ್ರಕಟಣೆ
ಮತದಾರರು ಮಾಡಬೇಕಾದದ್ದು
- ಮನೆಗೆ ಬರುವ ಬಿಎಲ್‌ಒಗಳಿಂದ ಎರಡು ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ.
- ಒಂದು ಪ್ರತಿಯನ್ನು ದಾಖಲೆಯಾಗಿ ನಿಮ್ಮ ಬಳಿ ಇಟ್ಟುಕೊಳ್ಳಿ.
- ಮತ್ತೊಂದು ಪ್ರತಿಯನ್ನು ಅಧಿಕಾರಿಗಳಿಗೆ ಹಿಂತಿರುಗಿಸಿ.
- ಹೊಸ ಹೆಸರು ಸೇರ್ಪಡೆ, ಹೆಸರು ಅಥವಾ ವಿಳಾಸ ತಿದ್ದುಪಡಿ ಇದ್ದರೆ ಇದೇ ವೇಳೆ ಅರ್ಜಿ ಸಲ್ಲಿಸಿ.
- ಕರಡು ಪಟ್ಟಿ ಪ್ರಕಟವಾದ ಬಳಿಕ ನಿಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಆಕ್ಷೇಪಣೆ ಸಲ್ಲಿಸಿ.
ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ನಿಖರ, ಪಾರದರ್ಶಕ ಹಾಗೂ ದೋಷರಹಿತವಾಗಿಡುವ ಉದ್ದೇಶದಿಂದ ಈ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ.

