ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರದ ಮಹತ್ವದ ಸೂಚನೆ : ಜೂನ್ 30ರೊಳಗೆ ಈ ಕೆಲಸ ಕಡ್ಡಾಯ..!

0
125

ನವದೆಹಲಿ : ದೇಶದ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಜೂನ್ 30ರೊಳಗೆ ಎಲ್ಲಾ ಅರ್ಹ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರು ತಮ್ಮ e-KYC (ಇ-ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಿಗದಿತ ಅವಧಿಯೊಳಗೆ e-KYC ಮಾಡಿಸದಿದ್ದರೆ, ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿ ಹಣ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಸಬ್ಸಿಡಿ ನಿಜವಾದ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ಮಾಡುವುದು ಹಾಗೂ ಅನರ್ಹರು ಸಬ್ಸಿಡಿ ಪಡೆಯುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.

ಗ್ಯಾಸ್ ಬುಕಿಂಗ್‌ಗೆ ಯಾವುದೇ ತೊಂದರೆ ಇಲ್ಲ

e-KYC ಪೂರ್ಣಗೊಳಿಸದಿದ್ದರೂ ಗ್ಯಾಸ್ ಸಿಲಿಂಡರ್ ಬುಕಿಂಗ್ ಅಥವಾ ಮನೆಗೆ ಡೆಲಿವರಿ ಸೇವೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಕೇವಲ ಸಬ್ಸಿಡಿ ಹಣ ಮಾತ್ರ ತಾತ್ಕಾಲಿಕವಾಗಿ ನಿಲ್ಲಬಹುದು. e-KYC ಆಗಿಲ್ಲ ಎಂಬ ಕಾರಣ ನೀಡಿ ಗ್ರಾಹಕರ ಗ್ಯಾಸ್ ಬುಕಿಂಗ್ ಅಥವಾ ಡೆಲಿವರಿಯನ್ನು ತಡೆಹಿಡಿಯಬಾರದು ಎಂದು ಕೇಂದ್ರ ಸರ್ಕಾರ ಗ್ಯಾಸ್ ವಿತರಕರಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ನಿಯಮ ಉಲ್ಲಂಘಿಸುವ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

e-KYC ಮಾಡಿಸಬಹುದಾದ ವಿಧಾನಗಳು

1. ಡೆಲಿವರಿ ಬಾಯ್ ಮೂಲಕ:
ಸಿಲಿಂಡರ್ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿಯ ಬಳಿ ಇರುವ ಬಯೋಮೆಟ್ರಿಕ್ ಸಾಧನದ ಮೂಲಕ ಮನೆಯಲ್ಲೇ e-KYC ಪೂರ್ಣಗೊಳಿಸಬಹುದು.

2. ಗ್ಯಾಸ್ ಏಜೆನ್ಸಿಯಲ್ಲಿ:
ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಬೆರಳಚ್ಚು, ಮುಖ ಗುರುತಿಸುವಿಕೆ ಅಥವಾ ಐರಿಸ್ ಪರಿಶೀಲನೆಯ ಮೂಲಕ e-KYC ಮಾಡಿಸಬಹುದು.

3. ಆನ್‌ಲೈನ್ ಮೂಲಕ:
ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಮೊಬೈಲ್ ಆಪ್ ಅಥವಾ ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿ e-KYC ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಗಮನಿಸಿ: ಈಗಾಗಲೇ ಯಶಸ್ವಿಯಾಗಿ e-KYC ಮಾಡಿಸಿಕೊಂಡಿರುವ ಗ್ರಾಹಕರು ಮತ್ತೆ ಮಾಡುವ ಅಗತ್ಯವಿಲ್ಲ.

ಪ್ರತಿ ಹಣಕಾಸು ವರ್ಷಕ್ಕೊಮ್ಮೆ ಕಡ್ಡಾಯ

ಸಬ್ಸಿಡಿ ಪಡೆಯುವ ಗ್ರಾಹಕರು ಪ್ರತಿ ಹಣಕಾಸು ವರ್ಷದಲ್ಲಿ ಒಮ್ಮೆಯಾದರೂ e-KYC ಮಾಡಿಸಬೇಕು. ಆಗ ಮಾತ್ರ ಸಬ್ಸಿಡಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಒಂದು ವೇಳೆ ಸಬ್ಸಿಡಿ ಸ್ಥಗಿತಗೊಂಡರೆ, e-KYC ಪೂರ್ಣಗೊಳಿಸಿದ ನಂತರವೇ ಸಬ್ಸಿಡಿ ಮರುಪ್ರಾರಂಭವಾಗುತ್ತದೆ.

ಉಜ್ವಲ ಯೋಜನೆ ಫಲಾನುಭವಿಗಳು ವಿಶೇಷ ಗಮನ ನೀಡಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಉಚಿತ ಎಲ್‌ಪಿಜಿ ಸಂಪರ್ಕ ಪಡೆದಿರುವ ಫಲಾನುಭವಿಗಳು ಜೂನ್ 30ರೊಳಗೆ e-KYC ಮಾಡಿಸದಿದ್ದರೆ, ಅವರಿಗೆ ದೊರೆಯುತ್ತಿರುವ ₹300 ಸಬ್ಸಿಡಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕೊನೆಯ ದಿನದವರೆಗೆ ಕಾಯದೆ ತಕ್ಷಣವೇ e-KYC ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರ ಮನವಿ ಮಾಡಿದೆ.

LEAVE A REPLY

Please enter your comment!
Please enter your name here