ಭಾರತೀಯ ಹಸ್ತಪ್ರತಿಗಳಲ್ಲಿರುವ ಪ್ರಾಚೀನ ವೈದ್ಯಶಾಸ್ತ್ರ ಅನಾವರಣ ಇಂದಿನ ತುರ್ತು ಅಗತ್ಯ : ಡಾ. ನಾರಾಯಣಂ ಶ್ರೀಕಾಂತ್

0
5

ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಭಾರತೀಯ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿ ಅನಾವರಣ ಇಂದಿನ ತುರ್ತು ಆವಶ್ಯಕ ಎರಡು ವಾರಗಳ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಾರ್ಯಾಗಾರ ಸಮಾರೋಪದಲ್ಲಿ ಡಾ. ನಾರಾಯಣಂ ಶ್ರೀಕಾಂತ್ ಅಭಿಮತ.

ಉಡುಪಿಯ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಭವನದಲ್ಲಿ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಮತ್ತು ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರ ಪರಮಾನುಗ್ರಹದಿಂದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ(ರಿ) ಉಡುಪಿ ಮತ್ತು ಭಾರತ ಸರಕಾರದ ಅಧೀನದಲ್ಲಿರುವ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ (CSU) ಹಾಗೂ ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್ (CCRAS) ಇವರ ಸಹಭಾಗಿತ್ವದಲ್ಲಿ ಎರಡು ವಾರಗಳ ಕಾಲ ನಡೆದ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್ ಸಂಸ್ಥೆಯ ಉಪ ಮಹಾನಿರ್ದೇಶಕರಾದ ಡಾ. ನಾರಾಯಣಂ ಶ್ರೀಕಾಂತ್ ಇವರು ಶಿಬಿರಾರ್ಥಿಗಳೊಂದಿಗೆ ಸಂವಾದಗೈಯುತ್ತ 15 ದಿನಗಳ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಅವರು
ಈ ಕಾರ್ಯಾಗಾರದಲ್ಲಿ ತುಳು ಮತ್ತು ಪ್ರಾಚೀನ ಕನ್ನಡ ಲಿಪಿಗಳನ್ನು ಚೆನ್ನಾಗಿ ಕಲಿತ ಫಲಾನುಭವಿಗಳೊಂದಿಗೆ ಸಂವಾದ ಗೈಯುತ್ತಾ ಮೇಲಿನ ಈ ಸಂದೇಶವನ್ನು ನೀಡಿದರು.
ಹಸ್ತಪ್ರತಿಗಳ ಲಿಪಿಗಳ ಸಂರಕ್ಷಣೆ ಕಾರ್ಯದ ಬಗ್ಗೆ ಬಹಳ ಅಪೇಕ್ಷೆ ಇದ್ದು ಮುಂದಿನ ದಿನಗಳಲ್ಲಿ ವ್ಯಾಪಕವಾದ ಲಿಪಿ ಕಾರ್ಯಾಗಾರಗಳು ನಡೆಯುವಂತೆ ಯೋಜನೆಯನ್ನು ರೂಪಿಸಲಾಗುವುದು.

ನಮ್ಮ ದೇಶದಲ್ಲಿ ಮನೆ-ಮನೆಗಳಲ್ಲಿ ದೊರಕುವ ವೈದ್ಯಶಾಸ್ತ್ರದ – ರಸಶಾಸ್ತ್ರ ಮನೆಮದ್ದು ಮೊದಲಾದವುಗಳ ಆಕಾರವೇ ಇದ್ದು ಇದರ ಲಿಪ್ಯಂತರ ಕಾರ್ಯ ಹಾಗೂ ಶುದ್ಧ ಪ್ರತಿಗಳನ್ನು ಸಿದ್ಧಪಡಿಸುವಿಕೆ ಹಾಗೂ ಪುಸ್ತಕ ಪ್ರಕಾಶನಕ್ಕೆ ಬೇಕಾದ ಎಲ್ಲ ವಿಧದ ವ್ಯವಸ್ಥೆಗಾಗಿ ನಿಮ್ಮೊಂದಿಗೆ ಭಾರತ ಸರ್ಕಾರದ CCRAS ಸಂಸ್ಥೆಯು ಕೈಜೋಡಿಸುತ್ತದೆ. ತಮ್ಮ ಹೆಸರಿನಲ್ಲಿ ಪುಸ್ತಕ ಪ್ರಕಾಶನ ನಡೆಸಲಾಗುವುದು . ಈ ಮೂಲಕ ಭಾರತೀಯ ವೈದ್ಯಶಾಸ್ತ್ರದ ಪ್ರಯೋಜನ ಸಾಮಾಜಿಕವಾಗಿ ಲಭ್ಯವಾಗಲಿದೆ. ಇದಕ್ಕೆ ನಮ್ಮ ಸಂಸ್ಥೆ ಕಟಿಬದ್ಧವಾಗಿದೆ.

ಉತ್ತರ ಭಾರತ -ಪೂರ್ವ ಭಾರತಗಳಲ್ಲಿ ಈ ಕಾರ್ಯ ಈಗಾಗಲೇ ಭರದಿಂದ ಸಾಗುತ್ತಿದ್ದು ಇದೀಗ ದಕ್ಷಿಣದ ಭಾಗದಲ್ಲಿ ವಿಶೇಷವಾಗಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಈ ಕಾರ್ಯಕ್ಕೆ ಈ ಕಾರ್ಯಗಾರದ ಮೂಲಕ ಚಾಲನೆ ದೊರೆತಂತಾಗಿದೆ. ಮುಂದಿನ ದಿನಗಳಲ್ಲಿ ಭಾರತ ಸರಕಾರದ ವಿಶೇಷ ಮಾನ್ಯತೆಯಲ್ಲಿ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದಿಂದ ಇನ್ನೂ ಹೆಚ್ಚಿನ ಸಂಶೋಧನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹರುಷ ವ್ಯಕ್ತಪಡಿಸಿದರು.
ಈ ಸಮಾರೋಪ ಸಮಾರಂಭದಲ್ಲಿ ಹಿರಿಯ ವಿದ್ವಾಂಸರಾದ ಡಾ ಪಾದೇಕಲ್ ವಿಷ್ಣು ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ಹಸ್ತಪ್ರತಿಗಳ ಲಿಪಿಗಳ ಸೊಬಗು ಮತ್ತು ಸ್ವಾರಸ್ಯಕರ ಸಂಗತಿಗಳನ್ನು ವಿವರಿಸಿದರು.

ಬೆಂಗಳೂರಿನ ಕೇಂದ್ರೀಯ ಆಯುರ್ವೇದ ಸಂಸ್ಥೆಯ ನಿರ್ದೇಶಕರಾದ ಡಾ ಟಿ ಮಹೇಶ್ವರ್ ಅವರು ಉಪಸ್ಥಿತರಿದ್ದರು. ಎರಡು ವಾರಗಳ ಕಾಲ ಈ ಕಾರ್ಯಾಗಾರದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿದ್ದ ನವ ದೆಹಲಿಯ CCRAS ನ ಸಂಸ್ಕೃತ ವಿದ್ವಾಂಸರಾದ ಡಾ.ದಿಲೀಪ್ ಕುಮಾರ್ ಕಾರ್ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಾಗಾರದಲ್ಲಿ ಉದ್ಯಾವರದ SDM ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಮತ್ತು SDM ಹಾಸನ ಕಾಲೇಜಿನ ವಿದ್ಯಾರ್ಥಿಗಳು, ಶ್ರೀ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಕಾರ್ಯಾಗಾರದಲ್ಲಿ ಉಡುಪಿಯ ಪ್ರಾಚ್ಯ ಸಂಚಯ ಪ್ರತಿಷ್ಠಾನದ ಡಾ ಕೃಷ್ಣಯ್ಯ, ತುಳು ಲಿಪಿ ವಿದ್ವಾಂಸರಾದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಶ್ರೀ ಮಹಿತೋಷ ಆಚಾರ್ಯ, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀನಿಕೇತನ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಜಿ.ವಿ.ಕಲ್ಲಾಪುರ ಬೆಂಗಳೂರಿನ IGNC ಸಂಸ್ಥೆಯ ಡಾ ಸದ್ಯೋಜಾತ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ದ ವಿದ್ವಾನ್ ಶ್ರೀಧರ ಆಚಾರ್ಯ ಸ್ಥಳೀಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಲಾಯಿತು. ಈ ಕಾರ್ಯಾಗಾರದ ಮುಖ್ಯ ಸಂಘಟಕರಾದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ದ ನಿರ್ದೇಶಕರಾದ ಡಾ ಬಿ ಗೋಪಾಲಾಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here