ಕನ್ನಡ ಕವಿಗಳ ಗೌರವ, ಸಾಹಿತ್ಯದ ಬೆಳವಣಿಗೆಯೇ ಬದುಕಿನ ಗುರಿ – ಡಾ. ವಾಮನರಾವ್ ಬೇಕಲ್

0
6

ಕಾಸರಗೋಡು: ಕನ್ನಡ ಭಾಷೆ, ಸಾಹಿತ್ಯ ಹಾಗೂ ಕವಿಗಳ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಡಾ. ವಾಮನರಾವ್ ಬೇಕಲ್ ಅವರು ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ವ್ಯಕ್ತಿತ್ವವಾಗಿದ್ದಾರೆ.

ಕೇರಳದ ಕಾಸರಗೋಡಿನಲ್ಲಿರುವ ತಮ್ಮ ವಿಶಾಲ ಮನೆಯನ್ನು ‘ಕನ್ನಡ ಭವನಂ’ ಎಂದು ಹೆಸರಿಸಿ, ಅದನ್ನೇ ಸಾಹಿತ್ಯ ಚಟುವಟಿಕೆಗಳ ಕೇಂದ್ರವನ್ನಾಗಿ ರೂಪಿಸಿರುವ ಅವರು, ಸುಮಾರು 45 ಸಾವಿರಕ್ಕೂ ಅಧಿಕ ಪುಸ್ತಕಗಳ ಬೃಹತ್ ಸಂಗ್ರಹವನ್ನು ಹೊಂದಿದ್ದಾರೆ. ತಮ್ಮ ಸ್ವಂತ ಕೃತಿಗಳನ್ನೂ ಒಳಗೊಂಡಂತೆ ಅಪರೂಪದ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಮನೆಯಲ್ಲೇ ವೈಯಕ್ತಿಕ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ.

ಕನ್ನಡ ಭಾಷೆಯ ಮೇಲಿನ ಅಪಾರ ಪ್ರೀತಿಯಿಂದ ಪ್ರತಿ ತಿಂಗಳು ಎರಡು ಮೂರು ಬಾರಿ ಕನ್ನಡ ಕವಿಗಳ ಕವಿಗೋಷ್ಠಿಗಳನ್ನು ಆಯೋಜಿಸುತ್ತಾರೆ. ನಾಡಿನ ಹೆಸರಾಂತ ಕವಿಗಳನ್ನು ಆಹ್ವಾನಿಸಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುವುದಲ್ಲದೆ, ಅವರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಗೌರವ ಸಲ್ಲಿಸುತ್ತಾರೆ. ಕೇರಳಕ್ಕೆ ಆಗಮಿಸುವ ಕನ್ನಡ ಕವಿಗಳಿಗೆ ತಮ್ಮ ಮನೆಯಲ್ಲೇ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿ ಆತಿಥ್ಯ ನೀಡುವುದು ಅವರ ವಿಶೇಷ ಗುಣವಾಗಿದೆ.

ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಏಕಾಂಗಿಯಾಗಿ ಇಷ್ಟೊಂದು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ವಾಮನರಾವ್ ಬೇಕಲ್ ಅವರು ಕನ್ನಡಿಗರ ಪಾಲಿನ ಹೆಮ್ಮೆಯ ರತ್ನವಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗಾಗಿ ಅವರು ಅನೇಕ ಪ್ರಶಸ್ತಿ ಹಾಗೂ ಗೌರವಗಳಿಗೆ ಪಾತ್ರರಾಗಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಕರ್ನಾಟಕ ದಸರಾ 2026ರ ಸಂಭ್ರಮದ ಅಂಗವಾಗಿ ತಮ್ಮ ಊರಿಗೆ ಆಹ್ವಾನಿಸಿ, ಸ್ಥಳೀಯ ದೇವಸ್ಥಾನದಲ್ಲಿ ಕವಿಗೋಷ್ಠಿಯನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನನಗೆ ‘ಕವಿ ಶ್ರೇಷ್ಠಿ – 2026’ ಪ್ರಶಸ್ತಿ ನೀಡಿ ಗೌರವಿಸಿರುವುದು ಅವಿಸ್ಮರಣೀಯ ಅನುಭವವಾಗಿದೆ.

ಅವರ ಈ ಸಾಹಿತ್ಯ ಪ್ರೀತಿ ಮತ್ತು ಆತಿಥ್ಯಕ್ಕೆ ಪತ್ನಿ ಸಂಧ್ಯಾರಾಣಿ ಅವರ ಸಹಕಾರವೂ ವಿಶೇಷವಾಗಿದೆ. ಮನೆಗೆ ಆಗಮಿಸುವ ಅತಿಥಿಗಳನ್ನು ಪ್ರೀತಿಯಿಂದ ಬರಮಾಡಿಕೊಂಡು, ಊಟೋಪಚಾರ ಹಾಗೂ ಆತಿಥ್ಯದಲ್ಲಿ ಯಾವುದೇ ಕೊರತೆಯಾಗದಂತೆ ಕಾಳಜಿ ವಹಿಸುವ ಅವರು ಆದರ್ಶ ಗೃಹಿಣಿಯಾಗಿದ್ದಾರೆ.

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಡಾ. ವಾಮನರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ದಂಪತಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು.