ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

0
7

ಬೆಂಗಳೂರು : ಸಾಕಿ ಚಾರಿಟೇಬಲ್ ಟ್ರಸ್ಟ್ ನಿಂದ ನಗರದ ಎಪಿಎಸ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ “ನಾದ ನಮನ” ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರಿಗೆ ಅಪೂರ್ವ ಸಂಗೀತ ರಸದೌತಣವನ್ನು ಉಣಬಡಿಸಿತು.

ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಹಾಗೂ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರ ಅಮರ ಗೀತೆಗಳಿಗಾಗಿ ಈ ಕಾರ್ಯಕ್ರಮವನ್ನು ಸಮರ್ಪಿಸಲಾಗಿತ್ತು.

ಗಾಯಕರಾದ ಕಿರಣ್, ರಮೇಶ್, ಸಿರಿ ಹಾಗೂ ಲಕ್ಷ್ಮಿ ಅವರು ಎಸ್. ಜಾನಕಿ ಮತ್ತು ಡಾ. ರಾಜ್ಕುಮಾರ್ ಅವರ ಜನಪ್ರಿಯ ಗೀತೆಗಳನ್ನು ಮನೋಜ್ಞವಾಗಿ ಹಾಡಿ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು. ಅವರ ಸುಮಧುರ ಗಾಯನಕ್ಕೆ ಸಭಾಂಗಣದಲ್ಲಿ ಸಂಗೀತಾಸಾಕ್ತರು ಹುಚ್ಚೆದ್ದು ಕುಣಿದರು.

ಕಾರ್ಯಕ್ರಮದ ನಿರೂಪಕರಾದ ಸಾವಿತಾ ಅವರು ಪ್ರತಿಯೊಂದು ಹಾಡಿನ ಹಿನ್ನೆಲೆ, ಗೀತರಚನೆಕಾರರಾದ ದಿವಂಗತ ಚಿ. ಉದಯಶಂಕರ್ ಹಾಗೂ ಕೆ. ಸೀತಾರಾಮ ಶಾಸ್ತ್ರಿ ಅವರ ಸಾಹಿತ್ಯ ವೈಶಿಷ್ಟ್ಯವನ್ನು ಮನಮುಟ್ಟುವ ರೀತಿಯಲ್ಲಿ ಪರಿಚಯಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಕಾರ್ಯಕ್ರಮವನ್ನು ಎಪಿಎಸ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಸಿಎ ಡಾ. ವಿಷ್ಣು ಭರತ್ ಆಲಂಪಳ್ಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಗಾತಿ ವೆಂಕಟೇಶ್, ಎಚ್.ಸಿ. ಕೃಷ್ಣ, ಲಕ್ಷ್ಮೀಕಾಂತ್, ಕಿರಣ್ ಕುಮಾರ್, ರಮೇಶ್ ಚಂದ್ರ ಹಾಗೂ ಮೇದಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

600 ಆಸನಗಳ ಸಾಮರ್ಥ್ಯ ಹೊಂದಿರುವ ಎಪಿಎಸ್ ಆಡಿಟೋರಿಯಂ ಸಂಪೂರ್ಣ ಭರ್ತಿಯಾಗಿದ್ದು, ಕಾರ್ಯಕ್ರಮಕ್ಕೆ ಸಂಗೀತಾಭಿಮಾನಿಗಳಿಂದ ದೊರೆತ ಅಭೂತಪೂರ್ವ ಸ್ಪಂದನೆಗೆ ಸಾಕ್ಷಿಯಾಯಿತು. ನೆನಪುಗಳನ್ನು ಮರುಕಳಿಸಿದ ಸುಮಧುರ ಗೀತೆಗಳನ್ನು ಆಲಿಸಿದ ಪ್ರೇಕ್ಷಕರು ಪ್ರತಿಯೊಂದು ಗಾಯನಕ್ಕೂ ಹರ್ಷೋದ್ಗಾರ ಹಾಗೂ ಭರ್ಜರಿ ಕರತಾಡನದ ಮೂಲಕ ಕಲಾವಿದರನ್ನು ಅಭಿನಂದಿಸಿದರು.

ಕನ್ನಡ ಸಂಗೀತದ ಶ್ರೀಮಂತ ಪರಂಪರೆಯನ್ನು ಸ್ಮರಿಸುವ ಈ ವಿಶೇಷ ಸಂಗೀತ ಸಂಜೆ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ನೆನಪುಗಳನ್ನು ಮೂಡಿಸಿ ಯಶಸ್ವಿಯಾಗಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here