ಮಂಗಳೂರು : ತುಳುವ ಭಾಷೆ, ಸಂಸ್ಕೃತಿ ಮತ್ತು ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಸಂಘಟನೆಯ ತಾಲೂಕು ಮಟ್ಟದ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮೂರು ತಾಲೂಕುಗಳ ಸಂಚಾಲಕರನ್ನು ಮರುನೇಮಕ ಮಾಡಲಾಗಿದೆ.
ಕಾಪು ತಾಲೂಕು ಸಂಚಾಲಕರಾಗಿ ಡಾ. ನಿರಂಜನ್ ಶೆಟ್ಟಿ, ಬ್ರಹ್ಮಾವರ ತಾಲೂಕು ಸಂಚಾಲಕಿಯಾಗಿ ಆಶಾ ಎ. ಹೆಗ್ಡೆ ಹಾಗೂ ಉಳ್ಳಾಲ ತಾಲೂಕು ಸಂಚಾಲಕರಾಗಿ ಪವನ್ ರಾಜ್ ಕೊಲ್ಯ ಅವರನ್ನು ಮರುನೇಮಕ ಮಾಡಲಾಗಿದೆ.
ಇವರು ಕಳೆದ ಅವಧಿಯಲ್ಲಿ ತುಳುವ ಮಹಾಸಭೆಯ ಸಂಘಟನಾ ಚಟುವಟಿಕೆಗಳು, ಸದಸ್ಯತ್ವ ಅಭಿಯಾನ, ತುಳು ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಮರುನೇಮಕ ಮಾಡಲಾಗಿದೆ.
2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಉದ್ದೇಶಗಳನ್ನು ಜನಮಟ್ಟಕ್ಕೆ ತಲುಪಿಸುವುದು, ತುಳುವ ಭಾಷೆಗೆ ಸಂವಿಧಾನಾತ್ಮಕ ಮಾನ್ಯತೆಗಾಗಿ ಜನಜಾಗೃತಿ ಮೂಡಿಸುವುದು ಹಾಗೂ ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ನೂತನ ಉತ್ಸಾಹದಿಂದ ಕಾರ್ಯನಿರ್ವಹಿಸುವಂತೆ ನೂತನವಾಗಿ ಮರುನೇಮಕಗೊಂಡ ಸಂಚಾಲಕರಿಗೆ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಶುಭ ಹಾರೈಸಿದ್ದಾರೆ.
ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಮರುನೇಮಕಗೊಂಡ ಮೂವರು ಸಂಚಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಅವರ ಮುಂದಿನ ಅವಧಿಯ ಕಾರ್ಯಯೋಜನೆಗಳಿಗೆ ಶುಭಾಶಯ ಕೋರಿದ್ದಾರೆ.

