ಜುಲೈ 1ರಿಂದ ಪೆಟ್ರೋಲ್-ಡೀಸೆಲ್ ಮೇಲಿನ ಎಲ್ಲ ನಿರ್ಬಂಧ ರದ್ದು : ಕೇಂದ್ರ ಸರ್ಕಾರದ ಮಹತ್ವದ ಆದೇಶ

0
12

ನವದೆಹಲಿ : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಸುಧಾರಿಸಿರುವ ಹಿನ್ನೆಲೆಯಲ್ಲಿ, ಇಂಧನ ಮಾರಾಟದ ಮೇಲಿದ್ದ ಎಲ್ಲ ತಾತ್ಕಾಲಿಕ ನಿರ್ಬಂಧಗಳನ್ನು ಜುಲೈ 1, 2026ರಿಂದ ತೆರವುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ವಾಹನ ಸವಾರರು, ಕೈಗಾರಿಕೆಗಳು ಹಾಗೂ ವಾಣಿಜ್ಯ ಬಳಕೆದಾರರಿಗೆ ನಿರಾಳತೆ ಸಿಕ್ಕಿದೆ.

ಮಧ್ಯಪ್ರಾಚ್ಯದಲ್ಲಿ ಉಂಟಾಗಿದ್ದ ಸಂಘರ್ಷದಿಂದ ಜಾಗತಿಕ ಇಂಧನ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ, ಜೂನ್ 12ರಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ‘ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ ಆದೇಶ–2026’ ಅಡಿಯಲ್ಲಿ ಹಲವು ತಾತ್ಕಾಲಿಕ ನಿಯಂತ್ರಣಗಳನ್ನು ಜಾರಿಗೆ ತಂದಿತ್ತು.

ಆದೇಶದ ಪ್ರಕಾರ, ವಾಹನವೊಂದಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಪೂರೈಸುವ ಮಿತಿಯನ್ನು ವಿಧಿಸಲಾಗಿತ್ತು. ಜೊತೆಗೆ ಕೈಗಾರಿಕಾ ಹಾಗೂ ವಾಣಿಜ್ಯ ಬಳಕೆದಾರರಿಗೂ ಇಂಧನ ಮಾರಾಟದ ಮೇಲೆ ನಿಯಂತ್ರಣ ಹೇರಲಾಗಿತ್ತು.

ಸೋಮವಾರ ಹೊರಡಿಸಿದ ಹೊಸ ಅಧಿಸೂಚನೆಯಲ್ಲಿ, ದೇಶದ ಇಂಧನ ಪೂರೈಕೆ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಇದೀಗ ಪೂರೈಕೆ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿರುವುದರಿಂದ ಹಿಂದಿನ ನಿರ್ಬಂಧಗಳು “ಸಾರ್ವಜನಿಕ ಹಿತಾಸಕ್ತಿಯಲ್ಲಿ ಇನ್ನು ಅಗತ್ಯವಿಲ್ಲ” ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ನಿರ್ಬಂಧಗಳು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL) ಸಂಸ್ಥೆಗಳ ಚಿಲ್ಲರೆ ಇಂಧನ ಮಾರಾಟ ಮಳಿಗೆಗಳಲ್ಲಿ ಜಾರಿಯಲ್ಲಿದ್ದವು.

ಜುಲೈ 1ರಿಂದ ಜೂನ್ 12ರ ಅಧಿಸೂಚನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗುತ್ತಿದ್ದು, ಇಂಧನ ಮಾರುಕಟ್ಟೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲಿದೆ. ಇದರೊಂದಿಗೆ ವಾಹನಗಳಿಗೆ ವಿಧಿಸಲಾಗಿದ್ದ ದಿನದ 200 ಲೀಟರ್ ಡೀಸೆಲ್ ಮಿತಿಯೂ ರದ್ದಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಖರೀದಿಯಲ್ಲಿ ಇದ್ದ ಎಲ್ಲ ತಾತ್ಕಾಲಿಕ ನಿರ್ಬಂಧಗಳು ಅಂತ್ಯಗೊಳ್ಳಲಿವೆ.

ಈ ನಿರ್ಧಾರದಿಂದ ಸಾರಿಗೆ ವಲಯ, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಸಾಮಾನ್ಯ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.

LEAVE A REPLY

Please enter your comment!
Please enter your name here