ಹೆಚ್ಚು ಆದಾಯ ಗಳಿಸುವ ಪತ್ನಿಗೆ ಜೀವನಾಂಶ ಬೇಡ : ಹೈಕೋರ್ಟ್ ಮಹತ್ವದ ತೀರ್ಪು..!

0
17

ಬೆಂಗಳೂರು : ವಿಚ್ಛೇದನ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿರುವ ಕರ್ನಾಟಕ ಹೈಕೋರ್ಟ್‌, ಪತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಪತಿ ಪ್ರತಿ ತಿಂಗಳು 20 ಸಾವಿರ ರೂ. ಜೀವನಾಂಶ ನೀಡಬೇಕೆಂದು ವಿಚಾರಣ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.

ವಿಚಾರಣ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ತೀರ್ಪಿನಲ್ಲಿ, ಮಹಿಳೆಯರಿಗೆ ಪುರುಷರು ಜೀವನಾಂಶ ನೀಡಲೇಬೇಕು ಎಂಬ ಕೇವಲ ಲಿಂಗಾಧಾರಿತ ಊಹೆಗಳ ಆಧಾರದ ಮೇಲೆ ನ್ಯಾಯಾಲಯಗಳು ಆದೇಶ ನೀಡಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತ್ನಿ ಆರ್ಥಿಕವಾಗಿ ಸದೃಢಳಾಗಿದ್ದು, ಪತಿಗಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದರೆ ಹಾಗೂ ಮಕ್ಕಳ ಪಾಲನೆಯಂತಹ ಹೆಚ್ಚುವರಿ ಹೊಣೆಗಾರಿಕೆಗಳೂ ಇಲ್ಲದಿದ್ದರೆ ಜೀವನಾಂಶ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ವಿವರದ ಪ್ರಕಾರ, 2024ರಲ್ಲಿ ವಿವಾಹವಾಗಿದ್ದ ದಂಪತಿ ಭಿನ್ನಾಭಿಪ್ರಾಯಗಳಿಂದ ಕೆಲವೇ ತಿಂಗಳಲ್ಲಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಬಳಿಕ ಪತ್ನಿ ಜೀವನಾಂಶ ಕೋರಿ ವಿಚಾರಣ ನ್ಯಾಯಾಲಯದ ಮೊರೆ ಹೋಗಿದ್ದರು. ಪತಿಗೆ ಮಾಸಿಕ 60,646 ರೂ. ವೇತನವಿದ್ದರೆ, ಪತ್ನಿ 1 ಲಕ್ಷ ರೂ. ಮಾಸಿಕ ಸಂಬಳ ಪಡೆಯುತ್ತಿದ್ದರು.

ಆದರೂ ವಿಚಾರಣ ನ್ಯಾಯಾಲಯವು ಪತಿ ಪ್ರತಿ ತಿಂಗಳು 20 ಸಾವಿರ ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಪತಿಗೆ ಅನುಕೂಲಕರವಾಗಿ ತೀರ್ಪು ನೀಡಿರುವ ಹೈಕೋರ್ಟ್, ವಿಚಾರಣ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ಈ ತೀರ್ಪು, ಜೀವನಾಂಶ ಪ್ರಕರಣಗಳಲ್ಲಿ ಆರ್ಥಿಕ ಸಾಮರ್ಥ್ಯ ಮತ್ತು ವಾಸ್ತವ ಪರಿಸ್ಥಿತಿಗಳಿಗೆ ಆದ್ಯತೆ ನೀಡಬೇಕೆಂಬ ಸಂದೇಶವನ್ನು ನೀಡುವ ಮಹತ್ವದ ತೀರ್ಪು ಎಂದು ಕಾನೂನು ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

LEAVE A REPLY

Please enter your comment!
Please enter your name here