ರಸ್ತೆ ನೀಡಿ , ಇಲ್ಲವೇ ಮತ ಕೇಳಬೇಡಿ!’ – ಕಡಂದಲೆ ಕಲ್ಲೋಳಿ ಗ್ರಾಮಸ್ಥರ ಖಡಕ್ ಎಚ್ಚರಿಕೆ

0
68

ಮೂಡುಬಿದಿರೆ : ನಮಗೆ ಜನಪ್ರತಿನಿಧಿಗಳ ಶೋಕಿ ಬೇಡ, ರಸ್ತೆ ಅಭಿವೃದ್ಧಿ ಬೇಕು. ಮೊದಲು ರಸ್ತೆ ಸರಿಪಡಿಸಿ, ಆಮೇಲೆ ಮತ ಕೇಳಲು ಬನ್ನಿ!” – ಇದು ಕಡಂದಲೆ ಗ್ರಾಮದ ಕಲ್ಲೋಳಿ ರಸ್ತೆಯ ದುಸ್ಥಿತಿಯಿಂದ ಬೇಸತ್ತಿರುವ ಗ್ರಾಮಸ್ಥರು ರಾಜಕಾರಣಿಗಳಿಗೆ ನೀಡಿರುವ ನೇರ ಎಚ್ಚರಿಕೆ.

ಹಲವು ವರ್ಷಗಳಿಂದ ತಮ್ಮ ಮೂಲಭೂತ ಹಕ್ಕಿಗಾಗಿ ಹೋರಾಡುತ್ತಿರುವ ಇಲ್ಲಿನ ನಿವಾಸಿಗಳು, ಈ ಬಾರಿ ವ್ಯವಸ್ಥೆಯ ವಿರುದ್ಧ ಸಿಡಿದು ನಿಂತಿದ್ದಾರೆ. ರಸ್ತೆ ದುರಸ್ತಿಯಾಗದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿ, ಗ್ರಾಮದಾದ್ಯಂತ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.

ಗ್ರಾಮದ ಪ್ರಮುಖ ಜಂಕ್ಷನ್‌ಗಳು ಮತ್ತು ರಸ್ತೆ ಬದಿಗಳಲ್ಲಿ ರಾರಾಜಿಸುತ್ತಿರುವ ಬ್ಯಾನರ್‌ಗಳು ಜನಪ್ರತಿನಿಧಿಗಳ ನಿಷ್ಕ್ರಿಯತೆಯನ್ನು ಅಣಕಿಸುವಂತಿವೆ. ವರ್ಷಗಳಿಂದ ಮನವಿ ನೀಡಿದರೂ ಕಣ್ಣು ಮುಚ್ಚಿ ಕುಳಿತಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಈ ಮೂಲಕ ಖಡಕ್ ಸಂದೇಶ ರವಾನಿಸಲಾಗಿದೆ.

ಆಟೋಗಳೂ ಬರಲ್ಲ!

ಸಾವಿರಾರು ಮತದಾರರು ವಾಸಿಸುವ ಈ ಭಾಗದ ಕಲ್ಲೋಳಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಬಿದ್ದಿರುವ ಗುಂಡಿಗಳಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಇದೆ. ತುರ್ತು ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಆಟೋ ಚಾಲಕರು ಈ ರಸ್ತೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವೃದ್ಧರು ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ನೆನೆಗುದಿಗೆ ಬಿದ್ದ ಭರವಸೆ :

“ಕಳೆದ 2022ರ ಜುಲೈನಲ್ಲಿ ನೆರೆ ಹಾನಿಯಾದಾಗ ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್ ಅವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಭಿವೃದ್ಧಿಯ ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷ ಕಳೆದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ” ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಮುಂದಿನ ನಡೆ ಮುತ್ತಿಗೆ!

“ಇನ್ನು ಮುಂದೆ ಮಳೆಯ ನೆಪ ಹೇಳಿ ಕಾಮಗಾರಿ ವಿಳಂಬ ಮಾಡುವುದನ್ನು ಸಹಿಸುವುದಿಲ್ಲ. ತಕ್ಷಣವೇ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು,” ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಕಳೆದ 4-5 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ಸಂಚಾರ ನರಕಸದೃಶವಾಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಶಾಶ್ವತವಾಗಿ ರಸ್ತೆ ನಿರ್ಮಿಸಿಕೊಡಬೇಕು.”
– ಸಂತೋಷ್ ಶೆಟ್ಟಿಗಾರ್, ಕಲ್ಲೋಳಿ

ಚುನಾವಣೆ ಬಂದಾಗ ಭರವಸೆಗಳ ಮಹಾಪೂರ ಹರಿಸುವ ನಾಯಕರು, ಗೆದ್ದ ಮೇಲೆ ಇತ್ತ ತಿರುಗಿಯೂ ನೋಡುವುದಿಲ್ಲ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಕಡಂದಲೆ ಗ್ರಾಮವೇ ಸಾಕ್ಷಿ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಾರಾ? ಅಥವಾ ಗ್ರಾಮಸ್ಥರು ಮತದಾನ ಬಹಿಷ್ಕಾರದ ನಿರ್ಧಾರಕ್ಕೆ ಬದ್ಧರಾಗುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ವಿಶೇಷ ವರದಿ: ಜಗದೀಶ್ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here