ಮಂಗಳೂರು : ತುಳು ರಂಗಭೂಮಿಯ ಹಿರಿಯ ನಟ, ನಿರ್ದೇಶಕ, ನಾಟಕಕಾರ ಹಾಗೂ ಕಥೆಗಾರ ಜನಾರ್ದನ ಕಾಯರಪಳಿಕೆ ಅವರು ನಿಧನರಾಗಿದ್ದು, ಅವರ ಅಗಲಿಕೆಯಿಂದ ತುಳು ನಾಟಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
1990ರ ದಶಕದಲ್ಲಿ ತುಳು ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜನಾರ್ದನ ಕಾಯರಪಳಿಕೆ ಅವರು ಕೇವಲ ಪ್ರತಿಭಾವಂತ ನಟರಾಗಿಯೇ ಅಲ್ಲದೆ, ಯಶಸ್ವಿ ನಿರ್ದೇಶಕ ಹಾಗೂ ಸೃಜನಶೀಲ ನಾಟಕಕಾರರಾಗಿಯೂ ಹೆಸರುವಾಸಿಯಾಗಿದ್ದರು. ಸಮಾಜದ ಬದುಕಿನ ವಾಸ್ತವ ಚಿತ್ರಣವನ್ನು ತಮ್ಮ ನಾಟಕಗಳ ಮೂಲಕ ಪ್ರೇಕ್ಷಕರ ಮುಂದಿಡುವಲ್ಲಿ ಅವರು ವಿಶೇಷ ಕೌಶಲ್ಯ ಹೊಂದಿದ್ದರು.
ಅವರ ರಚನೆಯ ‘ವಿಷಚಕ್ರ’, ‘ಕುಂಕುಮ ಕಾಣಿಕೆ’ ಹಾಗೂ ‘ಬೆಗರ್ ನೆತ್ತೆರ್’ ಮೊದಲಾದ ತುಳು ನಾಟಕಗಳು ಅಪಾರ ಜನಪ್ರಿಯತೆ ಗಳಿಸಿದ್ದು, 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ದಾಖಲೆ ನಿರ್ಮಿಸಿದ್ದವು. ಈ ನಾಟಕಗಳ ಮೂಲಕ ಅವರು ತುಳು ರಂಗಭೂಮಿಗೆ ಹೊಸ ಆಯಾಮವನ್ನು ನೀಡಿದ್ದರು.
ನಾಟಕದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುವ ಅಭಿನಯ, ಪರಿಣಾಮಕಾರಿ ನಿರ್ದೇಶನ ಹಾಗೂ ಸಮಾಜಮುಖಿ ಕಥಾವಸ್ತುಗಳಿಂದ ಜನಾರ್ದನ ಕಾಯರಪಳಿಕೆ ಅವರು ಕಲಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ್ದರು. ಅವರ ಸೇವೆಯನ್ನು ಪರಿಗಣಿಸಿ ತುಳು ರಂಗಭೂಮಿಯ “ಭೀಷ್ಮ” ಹಾಗೂ “ಸರಸ್ವತಿಯ ವರಪುತ್ರ” ಎಂದೂ ಹಲವರು ಗೌರವದಿಂದ ಕರೆಯುತ್ತಿದ್ದರು.

