ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ – ಶ್ರೀ ಮಂಜುನಾಥೇಶ್ವರ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ

0
12

ಮಂಗಳೂರು : ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಮಂಗಳೂರು ಯೋಜನಾ ಕಚೇರಿ ಹಾಗೂ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಅಶೋಕನಗರ ಇವರ ಸಹಯೋಗದಲ್ಲಿ ಜೂನ್ 30ರಂದು ಆನ್‌ಲೈನ್ ಮಾಹಿತಿ ಮತ್ತು ಜಾಗೃತಿ ಕಾರ್ಯಗಾರ ಆಯೋಜಿಸಲಾಯಿತು.

ಕರ್ನಾಟಕ ರಾಜ್ಯಾದ್ಯಂತ 1011 ಶಾಲಾ-ಕಾಲೇಜುಗಳಲ್ಲಿ ಏಕಕಾಲದಲ್ಲಿ ನಡೆದ ಈ ಜಾಗೃತಿ ಕಾರ್ಯಕ್ರಮದಲ್ಲಿ ಅಶೋಕನಗರದ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸುಮಾರು 300 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದರು.

ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರು ಆನ್‌ಲೈನ್ ಮೂಲಕ ಆಶೀರ್ವಾದಪೂರ್ವಕ ಸಂದೇಶ ನೀಡಿದರು. ಬೆಂಗಳೂರು ಎಸ್‌ಪಿ ಡಾ. ವೆಂಕಟೇಶ್ ಪ್ರಸನ್ನ, ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯನಿರ್ವಹಣಾಧಿಕಾರಿ ಅನಿಲ್ ಎಸ್‌.ಎಸ್‌. ಅವರು ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಶಾಲಾ ಸಂಚಾಲಕಿ ಶ್ರುತಾ ಜಿತೇಶ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಇತರ ಗಣ್ಯರು ಉದ್ಘಾಟಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚಂದ್ರಶೇಖರ್ ಎಸ್. ಅವರು ಪ್ರಸ್ತಾವಿಕವಾಗಿ ಮಾತನಾಡಿ, ಇಂದಿನ ಯುವಜನರು ದುಷ್ಟಚಟಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಉರ್ವಾ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಮಹಮ್ಮದ್ ಆಲೀ ಅವರು ಮಾತನಾಡಿ, ಯುವಜನರು ಮಾದಕ ವ್ಯಸನದ ಆಕರ್ಷಣೆಯಿಂದ ದೂರವಿರಲು ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಶ್ರೀನಿವಾಸ ನಾಯಕ್ ಇಂದಾಜೆ ಅವರು, ಯುವ ಸಮಾಜದ ಸದೃಢ ನಿರ್ಮಾಣಕ್ಕಾಗಿ ಧರ್ಮಸ್ಥಳದ ಪೂಜ್ಯರು ರೂಪಿಸಿರುವ ಸಮಾಜಮುಖಿ ಯೋಜನೆಗಳನ್ನು ಎಲ್ಲರೂ ಅನುಸರಿಸುವಂತೆ ಕರೆ ನೀಡಿದರು.

ಶಾಲೆಯ ಪ್ರಾಂಶುಪಾಲೆ ಜೋಯ್ ಜೀವನ್ ರೈ ಅವರು ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವೂ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಎಸ್‌ಐ ಲಕ್ಷ್ಮಣ್, ಪೊಲೀಸ್ ಸಿಬ್ಬಂದಿ ವೆಂಕಟೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್, ಪತ್ರಕರ್ತ ಬಾಸ್ಕರ್ ರೈ ಕಟ್ಟ, ವಲಯ ಮೇಲ್ವಿಚಾರಕಿ ಸವಿತಾ ಹೆಗ್ಡೆ, ವಸಂತ್ ಪೆರಾಜೆ, ಸೇವಾಪ್ರತಿನಿಧಿಗಳಾದ ರೇಖಾ ಹಾಗೂ ಸುರೇಖ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದೀಪ್ತಿ ನಿರೂಪಿಸಿದ್ದು, ಉಷಾ ಹೆಗ್ಡೆ ಸಂಘಟಿಸಿದರು.

LEAVE A REPLY

Please enter your comment!
Please enter your name here