ಇಸ್ರೋ ಸಂಶೋಧನೆ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯದ ಉನ್ನತ ಹುದ್ದೆಗೆ ಸ್ವಯಂ ನಿವೃತ್ತಿ ಘೋಶಿಸಿ, ಯುವ ಪೀಳಿಗೆಯಲ್ಲಿ ಸೃಜನಶೀಲತೆ ಬಿತ್ತಲು ‘ಶಿಕ್ಷಾ’ ಸಂಸ್ಥೆಯ ಮೂಲಕ ಕ್ರಾಂತಿ ಮಾಡುತ್ತಿರುವ ಅಪ್ರತಿಮ ಮಾರ್ಗದರ್ಶಕ ಡಾ. ಟಿ ಪಿ ಎಸ್. ಆಕಾಶದ ನಕ್ಷತ್ರಗಳನ್ನು, ಭೂಮಿಯ ರಹಸ್ಯಗಳನ್ನು ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಅಳೆದ ವಿಜ್ಞಾನಿಯೊಬ್ಬರು, ಇಂದು ದೇಶದ ಕೋಟ್ಯಂತರ ಯುವಮನಸ್ಸುಗಳ ಭವಿಷ್ಯವನ್ನು ರೂಪಿಸುವ ಸದ್ದಿಲ್ಲದ ಕ್ರಾಂತಿಯಲ್ಲಿ ತೊಡಗಿದ್ದಾರೆ.
ಅವರೇ ಇಸ್ರೋ (ISRO) ಸಂಸ್ಥೆಯ ಮಾಜಿ ಹಿರಿಯ ವಿಜ್ಞಾನಿ ಡಾ. ಟಿ. ಪಿ. ಶಶಿಕುಮಾರ್. ಸರ್ಕಾರಿ ಸೇವೆಯ ಸರ್ವೋಚ್ಚ ಹುದ್ದೆಗಳಲ್ಲಿದ್ದೂ, ಅದನ್ನೆಲ್ಲ ಬಿಟ್ಟು ಯುವಜನತೆಯ ಮಾರ್ಗದರ್ಶನಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅವರ ಸ್ಪೂರ್ತಿದಾಯಕ ಕಥನ ಇಲ್ಲಿದೆ.
ಸಾಮಾನ್ಯ ಬಾಲಕನ ಅಸಾಧಾರಣ ಸಾಧನೆ
ಕೇರಳದ ಕಣ್ಣೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಪುಟ್ಟ ಗ್ರಾಮದಲ್ಲಿ ಜನಿಸಿದ ಶಶಿಕುಮಾರ್ ಅವರ ಬಾಲ್ಯ ಅತ್ಯಂತ ಸಾಧಾರಣವಾಗಿತ್ತು.
ಗ್ರಾಮೀಣ ಪರಿಸರದಲ್ಲಿ ಬೆಳೆದ ಇವರು ಆರಂಭದಲ್ಲಿ ಒಬ್ಬ ಸರಾಸರಿ ವಿದ್ಯಾರ್ಥಿಯಾಗಿದ್ದರು. ಸೋಲಿಗೆ ಹೆದರದೆ ‘ನದಿ ಹರಿಯುವಂತೆ ಹರಿ, ಮರ ಬೆಳೆಯುವಂತೆ ಬೆಳಿ’ Flow like a river, Grow like a tree ಎಂಬ ತತ್ವವನ್ನು ಬಾಲ್ಯದಲ್ಲೇ ಅಳವಡಿಸಿಕೊಂಡು ಸಾಗಿದವರು.
ಪದವಿಗಳ ಸರಮಾಲೆ
ಒಂದು ಕಾಲದಲ್ಲಿ ಸಾಮಾನ್ಯ ಅಂಕ ಗಳಿಸುತ್ತಿದ್ದ ಶಶಿಕುಮಾರ್, ಮುಂದೆ ಶಿಕ್ಷಣದ ಮಹತ್ವವನ್ನು ಅರಿತು ಜ್ಞಾನದ ಶಿಖರಗಳನ್ನೇ ಏರಿದರು. ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದ ನಂತರ, ಬೆಂಗಳೂರು ವಿಶ್ವವಿದ್ಯಾಲಯದಿಂದ ‘ಫ್ಲೂಯಿಡ್ ಮೆಕ್ಯಾನಿಕ್ಸ್’ Fluid Mechanics ವಿಷಯದಲ್ಲಿ ಪಿಎಚ್‌ಡಿ (Ph.D.) ಪದವಿ ಮುಗಿಸಿದರು.
ಕೇವಲ ವಿಜ್ಞಾನಕ್ಕಷ್ಟೇ ಸೀಮಿತವಾಗದೆ ಕಾನೂನು (LLB), ಉದ್ಯಮ ನಿರ್ವಹಣೆ (MBA), ಮನೋವಿಜ್ಞಾನ ಮತ್ತು ಕೌನ್ಸೆಲಿಂಗ್ (MS) ವಿಷಯಗಳಲ್ಲೂ ಉನ್ನತ ಪದವಿಗಳನ್ನು ಗಳಿಸಿದರು. ಇದರೊಂದಿಗೆ ಭಾರತೀಯ ಸಾಂಪ್ರದಾಯಿಕ ಜ್ಞಾನಗಳಾದ ಆಯುರ್ವೇದ, ಜ್ಯೋತಿಷ್ಯ ಮತ್ತು ವೈದಿಕ ವಿಜ್ಞಾನದಲ್ಲೂ ಆಳವಾದ ಅಧ್ಯಯನ ನಡೆಸಿದ್ದಾರೆ.
ಇಸ್ರೋದಿಂದ ಪ್ರಧಾನ ಮಂತ್ರಿ ಕಾರ್ಯಾಲಯದವರೆಗೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ವಿಜ್ಞಾನಿಯಾಗಿ ಸೇರಿದ ಡಾ. ಶಶಿಕುಮಾರ್, ಸುಮಾರು ಎರಡು ದಶಕಗಳ ಕಾಲ ದೇಶದ ಹೆಮ್ಮೆಯ ಬಾಹ್ಯಾಕಾಶ ಯೋಜನೆಗಳಲ್ಲಿ ಸೇವೆ ಸಲ್ಲಿಸಿದರು. ‘ಇಮೇಜ್ ಪ್ರೊಸೆಸಿಂಗ್’ ಮತ್ತು ‘ರಿಮೋಟ್ ಸೆನ್ಸಿಂಗ್’ ತಂತ್ರಜ್ಞಾನದಲ್ಲಿ ಇವರ ಕೊಡುಗೆ ಅಪಾರ.
ವಿಜ್ಞಾನಿಯಾಗಿ ಮಾತ್ರವಲ್ಲದೆ ನವದೆಹಲಿಯ ಕ್ಯಾಬಿನೆಟ್ ಸೆಕ್ರೆಟರಿಯೇಟ್ (ಪ್ರಧಾನ ಮಂತ್ರಿ ಕಾರ್ಯಾಲಯದ ಅಡಿಯಲ್ಲಿ ಬರುವ ಡೈರೆಕ್ಟರೇಟ್ ಜನರಲ್ ಆಫ್ ಸೆಕ್ಯೂರಿಟಿ) ವಿಭಾಗದಲ್ಲಿ ಡೆಪ್ಯುಟಿ ಡೈರೆಕ್ಟರ್ (ಉಪ ನಿರ್ದೇಶಕರು) ಆಗಿ ದೇಶದ ಭದ್ರತಾ ವಿಭಾಗದಲ್ಲೂ ಮಹತ್ತರ ಜವಾಬ್ದಾರಿ ನಿಭಾಯಿಸಿದರು.
ಕ್ಯಾಲಿಕಟ್ ವಿಶ್ವವಿದ್ಯಾಲಯದ UGC-Academic Staff College ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ.
ಯುವಜನತೆಗಾಗಿ ಸರ್ವೋಚ್ಚ ಹುದ್ದೆಯ ತ್ಯಾಗ : ನಿವೃತ್ತಿ ನಂತರದ ಸೇವೆ
ಸರ್ಕಾರದಲ್ಲಿ ಇನ್ನೂ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶವಿದ್ದರೂ, ಇಂದಿನ ಯುವ ಪೀಳಿಗೆಗೆ ಸರಿಯಾದ ದಿಕ್ಕು ತೋರಿಸಬೇಕೆಂಬ ಆಂತರಿಕ ಹಂಬಲದಿಂದಾಗಿ ಡಾ. ಶಶಿಕುಮಾರ್ ಅವರು ತಮ್ಮ ಉನ್ನತ ಹುದ್ದೆಗೆ ಸ್ವಯಂ ನಿವೃತ್ತಿ VRS ಘೋಷಿಸಿದರು.
ಅಂದಿನಿಂದ ಇಂದಿನವರೆಗೆ ಇವರು ದೇಶ-ವಿದೇಶಗಳ ಸಾವಿರಾರು ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ “ಅನಂತ ಶಕ್ತಿಯ ಸೃಜನಶೀಲತೆ” (Creativity to the power of Infinity) ಎಂಬ ವಿಷಯದಡಿ ಪ್ರೇರಕ ಭಾಷಣಗಳನ್ನು ನೀಡುತ್ತಾ, ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ.
ಶಿಕ್ಷಣದಲ್ಲಿ ಹೊಸ ಕ್ರಾಂತಿ
ಡಾ. ಶಶಿಕುಮಾರ್ ಅವರು ಸ್ಥಾಪಿಸಿರುವ “ಶಿಕ್ಷಾ” (SHIKSHA) ಸಂಸ್ಥೆಯು ಇಂದು ದೇಶದಲ್ಲಿ ಸಾಂಪ್ರದಾಯಿಕ ಶಿಕ್ಷಣಕ್ಕೆ ಹೊಸ ಆಯಾಮ ನೀಡುತ್ತಿದೆ.
ಧ್ಯೇಯ ಮತ್ತು ಕಾರ್ಯವೈಖರಿ:
ಕೇವಲ ಅಂಕ ಗಳಿಸುವ ಯಂತ್ರಗಳನ್ನು ಸೃಷ್ಟಿಸದೆ, ವಿದ್ಯಾರ್ಥಿಗಳಲ್ಲಿ ಕೌಶಲ್ಯ, ನೈತಿಕ ಮೌಲ್ಯಗಳು, ಮತ್ತು ಬದುಕನ್ನು ಎದುರಿಸುವ ಧೈರ್ಯ ತುಂಬುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
’ಜ್ಞಾನಂ’ (JNAANAM) ಪ್ರಾಯೋಗಿಕ ಕೇಂದ್ರ
ಇವರ ಸಂಸ್ಥೆಯ ಅಡಿಯಲ್ಲಿ ಕೇರಳದ ಪ್ರಕೃತಿಯ ಮಡಲಿನಲ್ಲಿ ‘ಜ್ಞಾನಂ’ ಎಂಬ ವಿಶಿಷ್ಟ ಗುರುಕುಲ ಮಾದರಿಯ ಕಲಿಕಾ ಶಿಬಿರಗಳನ್ನು ನಡೆಸಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಒಟ್ಟಾಗಿ ಬಂದು ಜೀವನ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಯುತ್ತಾರೆ.
ವಿಶ್ವವಿದ್ಯಾಲಯಗಳಿಗೆ ಮಾರ್ಗದರ್ಶಕ:
ಇವರು ಯಾವುದೇ ಒಂದು ಸೀಮಿತ ಕಾಲೇಜಿನ ಆಡಳಿತಕ್ಕೆ ಒಳಪಡದೆ, ದೇಶದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಶೈಕ್ಷಣಿಕ ಸಲಹೆಗಾರರಾಗಿ (Academic Consultant) ಮತ್ತು ಗೌರವಾನ್ವಿತ ಪ್ರಾಧ್ಯಾಪಕರಾಗಿ ತರಬೇತಿ ನೀಡುತ್ತಿದ್ದಾರೆ.
ಇವರ ಶೈಕ್ಷಣಿಕ ಹಿನ್ನೆಲೆ, ಬಾಲ್ಯ ಮತ್ತು ‘ಶಿಕ್ಷಾ’ (SHIKSHA / SABARMATI) ಸಂಸ್ಥೆಯ ಸಂಪೂರ್ಣ ವಿವರಗಳು ಅವರದೇ ಆದ ಅಧಿಕೃತ ವೆಬ್‌ಸೈಟ್ ಆದ drtps.in ಅಥವಾ drtpsasikumar.blogspot.com ನಲ್ಲಿ ಲಭ್ಯವಿವೆ.
ರಾಕೆಟ್ ವಿಜ್ಞಾನದ ಸಂಕೀರ್ಣ ಸೂತ್ರಗಳನ್ನು ಬಲ್ಲ ವಿಜ್ಞಾನಿಯೊಬ್ಬರು, ಇಂದು ಅಷ್ಟೇ ಸರಳವಾಗಿ ಮಾನವನ ಮನಸ್ಸನ್ನು ಓದಿ ಯುವಕರ ಭವಿಷ್ಯ ರೂಪಿಸುತ್ತಿರುವುದು ಇಡೀ ದೇಶ ಹೆಮ್ಮೆ ಪಡುವಂತಹ ಸಂಗತಿಯಾಗಿದೆ. ಡಾ. ಟಿ. ಪಿ. ಶಶಿಕುಮಾರ್ ಅವರ ಈ ಜ್ಞಾನದಾಸೋಹ ನಿರಂತರವಾಗಿ ಸಾಗಲಿ ಎಂಬುದೇ ಪತ್ರಿಕೆಯ ಆಶಯ.

