ಉಡುಪಿ: ಬ್ರಹ್ಮಾವರ ಹೇರೂರು ರೂಡ್ ಸೆಟ್ ಕ್ರಾಸಿಂಗ್ ಬಳಿ ರಾಷ್ಟ್ರೀಯ 66 ರಲ್ಲಿ ಬುಧವಾರ ಬೆಳಗ್ಗೆ ಕಾರು ಮತ್ತು ಬಸ್ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹುಲಿ ವೇಷದ ಕಲಾವಿದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಲಕ್ಷ್ಮೀ ನಗರದ ಮಂಜುನಾಥ್ (43) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದ ನಾಲ್ವರು ಅಲ್ಪ ಗಾಯದಿಂದ ಅಪಾಯದಿಂದ ಪಾರಾಗಿದ್ದಾರೆ. ಸಂತೆಕಟ್ಟೆ ಲಕ್ಷ್ಮಿನಗರದ ಐದು ಯುವಕರು ಗೋವಾದಲ್ಲಿ ನಡೆದ ಮೀಟಿಂಗ್ ಮುಗಿಸಿ, ಮನೆಗೆ ತಲುಪುವ ಮೊದಲೇ, ರಸ್ತೆ ಅಪಘಾತ ನಡೆದಿದೆ. ಉಡುಪಿಯತ್ತ ತೆರಳುತ್ತಿದ್ದ ವೇಗದೂತ ಬಸ್ಸೊಂದು ದಿಡೀರ್ ಆಗಿ ಬ್ರೇಕ್ ಹಾಕಿದ ಪರಿಣಾಮ, ಹಿಂದಿನಿಂದ ಬಂದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿಗೆ ಗುದ್ದಿದೆ.
ಮೃತ ಮಂಜುನಾಥ್ ಖ್ಯಾತ ಹುಲಿ ವೇಷದ ಕಲಾವಿದನಾಗಿದ್ದು, ಕಳೆದ ಹಲವು ವರ್ಷಗಳಿಂದ ಹಲವಾರು ಹುಲಿ ವೇಷದಾರಿಗಳಿಗೆ ಪೈಂಟಿಂಗ್ ಮಾಡಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.

