ಕಾರಿಗೆ ಫುಲ್‌ ಟ್ಯಾಂಕ್‌ ಡೀಸೆಲ್‌ ಹಾಕಿಸಿ ಹಣ ನೀಡದೆ ಎಸ್ಕೇಪ್‌ : ಬೆಂಗಳೂರಿನಲ್ಲಿ ಮೂವರು ಖದೀಮರ ಬಂಧನ

0
40

ಉಡುಪಿ : ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಪೂರ್ತಿಯಾಗಿ ಡೀಸೆಲ್ ತುಂಬಿಸಿಕೊಂಡು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ನಾಟಕವಾಡಿ ಹಣ ಪಾವತಿಸದೆ ವಂಚಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರಿಗೆ ಫುಲ್‌ ಟ್ಯಾಂಕ್‌ ಡೀಸೆಲ್‌ ಹಾಕಿಸಿ ಹಣ ನೀಡದೆ ಎಸ್ಕೇಪ್‌

ಬಂಧಿತ ಆರೋಪಿಗಳನ್ನು ಕಾಪು ತಾಲೂಕಿನ ಶಿರ್ವ ಕೋಟೆಕಾರ್ ನಿವಾಸಿ ಮಹಮ್ಮದ್ ರಿಯಾಜ್ (26), ಶಿರ್ವ ಭೂತಬೆಟ್ಟು ನಿವಾಸಿ ಮಹಮ್ಮದ್ ಅಫ್ರಾಜ್ (23) ಮತ್ತು ಉಡುಪಿ ಅಂಬಾಗಿಲಿನ ಮಾಂಡೋವಿ ಪ್ರಿನ್ಸ್ ಪ್ಯಾಲೇಸ್ ನಿವಾಸಿ ಆಶಿಲ್ (21) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬಿಳಿ ಬಣ್ಣದ ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ

ಜೂನ್ 27 ರಂದು ರಾತ್ರಿ 9:10 ರ ಸುಮಾರಿಗೆ ಕಾರ್ಕಳ ತಾಲೂಕಿನ ಕುರ್ಕಾಲು ಗ್ರಾಮದ ಸುಭಾಷ್ ನಗರದಲ್ಲಿರುವ ‘ಫಿಲ್ಲಿಂಗ್ ಸ್ಟೇಷನ್’ ಇಂಧನ ಬಂಕ್‌ಗೆ ಆರೋಪಿಗಳು ಬಿಳಿ ಬಣ್ಣದ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಬಂದಿದ್ದರು. ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಬಂಕ್ ನೌಕರ ಶಶಾಂಕ್ ಎಂಬಾತನಲ್ಲಿ ಕಾರಿಗೆ ‘ಫುಲ್ ಟ್ಯಾಂಕ್’ ಡೀಸೆಲ್ ತುಂಬಿಸುವಂತೆ ತಿಳಿಸಿದ್ದನು. ಅದರಂತೆ ನೌಕರ 4,711.09 ರೂಪಾಯಿ ಮೌಲ್ಯದ ಡೀಸೆಲ್ ತುಂಬಿಸಿದ್ದನು.

🔥 ಮಾಧ್ಯಮಗಳಿಂದ ಸತ್ಯ ಎತ್ತಿಹಿಡಿಯುವ ಕಾರ್ಯವಾಗಲಿ : ಡಾ.ಶುಭಾ

ಹಣ ಪಾವತಿಸಲು ನೌಕರ ಶಶಾಂಕ್ ಕ್ಯೂಆರ್ ಕೋಡ್ ತೋರಿಸಿದಾಗ, ಆರೋಪಿಗಳು ಅದನ್ನು ಸ್ಕ್ಯಾನ್ ಮಾಡುವಂತೆ ನಟಿಸಿ ಮೊದಲು ಬಿಲ್ ನೀಡುವಂತೆ ಕೇಳಿದ್ದರು. ನೌಕರ ಬಿಲ್ ಪ್ರಿಂಟ್ ತೆಗೆಯುವಷ್ಟರಲ್ಲಿ, ಹಣ ನೀಡದೆ ನಂಬಿಸಿ, ಕ್ಷಣಾರ್ಧದಲ್ಲಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಬಂಕ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಂಗಳೂರು ಮೂಲದ ಆಶಿಶ್ (27) ಎಂಬವರು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬೆಂಗಳೂರಿನಲ್ಲಿ ಖೆಡ್ಡಾ ತೋಡಿದ ಪೊಲೀಸರು

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವುದನ್ನು ಪತ್ತೆಹಚ್ಚಿ, ಅಲ್ಲಿಗೆ ಧಾವಿಸಿ ಆರೋಪಿಗಳನ್ನು ಜಾಲದೊಳಗೆ ಬೀಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. “ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಇವರು ಇದೇ ಮಾದರಿಯಲ್ಲಿ ಬೇರೆ ಎಲ್ಲಾದರೂ ಪೆಟ್ರೋಲ್ ಬಂಕ್‌ಗಳಿಗೆ ಅಥವಾ ಅಂಗಡಿಗಳಿಗೆ ವಂಚಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ” ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here