ಪುತ್ತೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 18 ಮತ್ತು 19ರಂದು ಆಯೋಜಿಸಲು ಉದ್ದೇಶಿಸಿರುವ ‘ಮೈಸೂರು ಕಂಬಳ’ ಕುರಿತು ರಾಜ್ಯ ಸರ್ಕಾರ ಮರುಚಿಂತನೆ ನಡೆಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದ್ದಾರೆ.
ಈ ಕುರಿತು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಹಂಚಿಕೊಂಡಿರುವ ಅವರು, ಕಂಬಳವು ಕರಾವಳಿ ಕರ್ನಾಟಕದ ಮಣ್ಣು, ಸಂಸ್ಕೃತಿ, ಜನಜೀವನ ಹಾಗೂ ಶತಮಾನಗಳ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಪವಿತ್ರ ಪರಂಪರೆಯಾಗಿದ್ದು, ಅದನ್ನು ಕೇವಲ ಮನರಂಜನೆ ಅಥವಾ ವಾಣಿಜ್ಯ ದೃಷ್ಟಿಕೋನದಿಂದ ನೋಡುವುದು ಅದರ ಘನತೆಗೆ ಧಕ್ಕೆ ತರುತ್ತದೆ ಎಂದು ತಿಳಿಸಿದ್ದಾರೆ.
ನಿರ್ದಿಷ್ಟ ಪ್ರದೇಶದ ಸಂಪ್ರದಾಯ ಹಾಗೂ ಧಾರ್ಮಿಕ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಕಂಬಳವನ್ನು ಅದರ ಮೂಲ ನೆಲೆಯಿಂದ ಬೇರ್ಪಡಿಸುವುದು ಅದರ ಆಂತರಿಕ ಪಾವಿತ್ರ್ಯತೆಗೆ ಧಕ್ಕೆ ತರುವ ಅಪಾಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ದಸರಾ ಮಹೋತ್ಸವದ ಮೂಲ ಸ್ವರೂಪವನ್ನು ಇನ್ನಷ್ಟು ಬಲಪಡಿಸುವತ್ತ ಸರ್ಕಾರ ಗಮನಹರಿಸಬೇಕು. ಪ್ರಸ್ತುತ ದಸರಾ ಆಯೋಜನೆಯಲ್ಲಿ ಆಡಳಿತಾತ್ಮಕ ಲೋಪಗಳು, ಮೂಲಸೌಕರ್ಯ ಕೊರತೆ ಹಾಗೂ ಇತರ ಸವಾಲುಗಳಿದ್ದು, ಅವುಗಳನ್ನು ಮೊದಲು ಪರಿಹರಿಸುವುದು ಸೂಕ್ತ ಎಂದು ಯದುವೀರ್ ಒಡೆಯರ್ ಸಲಹೆ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ‘ಮೈಸೂರು ಕಂಬಳ’ ಆಯೋಜಿಸಲು ಯೋಜನೆ ರೂಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಹಾಗೂ ಕಂಬಳದ ರೂವಾರಿಯಾಗಿರುವ ಅಶೋಕ್ ಕುಮಾರ್ ರೈ ಅವರು ಮೈಸೂರಿನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು. ವಿಟಿಯು ಸಮೀಪದ ಸುಮಾರು 23 ಎಕರೆ ಪ್ರದೇಶದಲ್ಲಿ ಕಂಬಳಕ್ಕೆ ಅಗತ್ಯ ಸಿದ್ಧತಾ ಕಾರ್ಯಗಳು ಆರಂಭಗೊಂಡಿವೆ.
ಆದರೆ, ಪರಿಸರವಾದಿಗಳು ಗಿಡ-ಮರಗಳ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದರೆ, ಇದೀಗ ಸಂಸದ ಯದುವೀರ್ ಒಡೆಯರ್ ಕೂಡ ಕಂಬಳ ಆಯೋಜನೆ ಕುರಿತು ಸರ್ಕಾರ ಮರುಚಿಂತನೆ ನಡೆಸಬೇಕೆಂದು ಆಗ್ರಹಿಸಿರುವುದು ಚರ್ಚೆಗೆ ಕಾರಣವಾಗಿದೆ.

