37 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ದೇಶದ ಮೊದಲ ಕೈದಿ! ಯಾರು ಈ ಸಾಯಿಬಣ್ಣ?

0
82

ಮೂರು ಕೊಲೆಗಳ ಆರೋಪಿ… 37 ವರ್ಷ ಜೈಲು… ಈಗ ಬಿಡುಗಡೆ!

ಬೆಂಗಳೂರು : ಸುಮಾರು 37 ವರ್ಷಗಳ ಕಾಲ ನಿರಂತರವಾಗಿ ಜೈಲು ಶಿಕ್ಷೆ ಅನುಭವಿಸಿದ್ದ 72 ವರ್ಷದ ಸಾಯಿಬಣ್ಣ ಎನ್. ನಾಟೀಕರ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಜೈಲು ಅಧಿಕಾರಿಗಳ ಪ್ರಕಾರ, ಭಾರತದಲ್ಲೇ ಸತತ 37 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಮೊದಲ ಕೈದಿ ಎಂಬ ದಾಖಲೆ ಸಾಯಿಬಣ್ಣ ಅವರ ಹೆಸರಿಗೆ ಸೇರಿದೆ.

ಮುಖ ತುಂಬ ಗಡ್ಡ, ತಲೆ ತುಂಬ ಬಿಳಿ ಕೂದಲು ಮತ್ತು ವಯೋಸಹಜವಾಗಿ ನಡುಗುವ ಕಾಲುಗಳೊಂದಿಗೆ ಜೈಲಿನ ಮುಖ್ಯ ದ್ವಾರದಿಂದ ಹೊರಬಂದ ಸಾಯಿಬಣ್ಣ ಸುಮಾರು ನಾಲ್ಕು ದಶಕಗಳ ಬಳಿಕ ಸ್ವತಂತ್ರ ಜೀವನದತ್ತ ಹೆಜ್ಜೆ ಇಟ್ಟಿದ್ದಾರೆ.

ಜೈಲಿನಲ್ಲಿದ್ದಾಗ ಉತ್ತಮ ನಡವಳಿಕೆ

ಈ ಕುರಿತು ಕಾರಾಗೃಹ ಇಲಾಖೆಯ ಡಿಜಿಪಿ ಆಲೋಕ್ ಕುಮಾರ್ ಪ್ರತಿಕ್ರಿಯಿಸಿ, “ನಾನು ಬೆಳಗಾವಿ ಮತ್ತು ಕಲಬುರಗಿ ಜೈಲುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಾಯಿಬಣ್ಣ ಅವರನ್ನು ಭೇಟಿ ಮಾಡಿದ್ದೆ. ಜೈಲಿನೊಳಗೆ ಅವರ ನಡವಳಿಕೆ ಉತ್ತಮವಾಗಿತ್ತು,” ಎಂದು ತಿಳಿಸಿದ್ದಾರೆ.

ಪೆರೋಲ್‌ನಲ್ಲಿ ಹೊರಬಂದು ಮತ್ತೆ ಜೋಡಿ ಕೊಲೆ

ಸಾಯಿಬಣ್ಣನ ಅಪರಾಧದ ಹಿನ್ನೆಲೆ ಅತ್ಯಂತ ಗಂಭೀರವಾಗಿದೆ. 1988ರಲ್ಲಿ ಮೊದಲ ಪತ್ನಿ ಮಲ್ಕವ್ವ ಅವರ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.

ಬಳಿಕ 1994ರಲ್ಲಿ ಪೆರೋಲ್ ಮೇಲೆ ಬಿಡುಗಡೆಯಾದ ಸಂದರ್ಭದಲ್ಲಿ ಎರಡನೇ ಮದುವೆಯಾಗಿ ನಾಗಮ್ಮ ಅವರನ್ನು ವಿವಾಹವಾಗಿದ್ದರು. ಅವರಿಗೆ ವಿಜಯಲಕ್ಷ್ಮಿ ಎಂಬ ಪುತ್ರಿಯೂ ಜನಿಸಿದ್ದಳು. ಆದರೆ ಕೆಲವೇ ವಾರಗಳಲ್ಲಿ ಎರಡನೇ ಪತ್ನಿ ಹಾಗೂ ಪುಟ್ಟ ಮಗಳನ್ನೂ ಕೊಲೆ ಮಾಡಿದ್ದ ಆರೋಪದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದರು.

ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ ಪರಿವರ್ತನೆ

ಈ ಜೋಡಿ ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು 2003ರಲ್ಲಿ ಮರಣದಂಡನೆ ವಿಧಿಸಿತ್ತು. ಆದರೆ ನಂತರ ಕರ್ನಾಟಕ ಹೈಕೋರ್ಟ್ ಈ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು.

ಸುಮಾರು ಹತ್ತು ವರ್ಷಗಳ ಕಾಲ ಏಕಾಂತ ಸೆರೆವಾಸ ಅನುಭವಿಸಿದ್ದನ್ನು ಹೈಕೋರ್ಟ್ ಕಾನೂನುಬಾಹಿರ ಹಾಗೂ ಅಮಾನವೀಯ ಎಂದು ಪರಿಗಣಿಸಿತ್ತು. ಜೊತೆಗೆ ಕ್ಷಮಾದಾನ ಅರ್ಜಿಯ ನಿರ್ಧಾರದಲ್ಲಿ ಉಂಟಾದ ವಿಳಂಬ ಸೇರಿದಂತೆ ಹಲವು ಕಾನೂನು ಅಂಶಗಳ ಹಿನ್ನೆಲೆಯಲ್ಲಿ ಅಂತಿಮವಾಗಿ ಸಾಯಿಬಣ್ಣ ಬಿಡುಗಡೆಗೊಂಡಿದ್ದಾರೆ.

ಪಶ್ಚಾತ್ತಾಪ ವ್ಯಕ್ತಪಡಿಸದ ಸಾಯಿಬಣ್ಣ

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಯಿಬಣ್ಣ, ತಾನು ಎಸಗಿದ ಕೊಲೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ.

ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಅವರು, ತಮ್ಮ ಪತ್ನಿಯರ ಮೇಲಿನ ಅನುಮಾನವೇ ಕೊಲೆಗೆ ಕಾರಣ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

LEAVE A REPLY

Please enter your comment!
Please enter your name here