ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಸಂತೆಕಟ್ಟೆಯ ಸಾರ್ವಜನಿಕ ಸಂತೆ ಮಾರ್ಕೆಟ್‌ನಲ್ಲಿ ಸಂಜೆಯ ಬಳಿಕ ಕುಡುಕರ ಹಾವಳಿ, ಇಸ್ಪೀಟ್ ಆಟ ಹಾಗೂ ಅಸಾಮಾಜಿಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮತ್ತು ದೇವಸ್ಥಾನದ ಭಕ್ತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಆರೋಪದಂತೆ, ಆದಿತ್ಯವಾರವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಜೆ ವೇಳೆಯಿಂದಲೇ ಕೆಲವರು ಮಾರ್ಕೆಟ್ ಆವರಣದಲ್ಲಿ ಅನಗತ್ಯವಾಗಿ ಸೇರಿ ಮದ್ಯಪಾನ ಮಾಡುವುದು, ಇಸ್ಪೀಟ್ ಆಡುವುದು ಹಾಗೂ ಗದ್ದಲ ಸೃಷ್ಟಿಸುವುದು ಸಾಮಾನ್ಯವಾಗಿದೆ. ರಾತ್ರಿ ತಡವರೆಗೂ ಈ ಚಟುವಟಿಕೆಗಳು ನಡೆಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ದೂರಲಾಗಿದೆ.
ಸಂತೆ ಮಾರ್ಕೆಟ್‌ಗೆ ಹೊಂದಿಕೊಂಡೇ ಇರುವ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ, ಮಾರ್ಕೆಟ್‌ನಲ್ಲಿ ಮದ್ಯಪಾನ ಮಾಡುವ ಕೆಲವರು ಬಿಯರ್ ಹಾಗೂ ಮದ್ಯದ ಖಾಲಿ ಬಾಟಲಿಗಳನ್ನು ದೇವಸ್ಥಾನದ ಆವರಣದತ್ತ ಎಸೆಯುತ್ತಿರುವುದರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಭಕ್ತರು ಆರೋಪಿಸಿದ್ದಾರೆ.
ಈ ಸಮಸ್ಯೆಯ ಕುರಿತು ದೇವಸ್ಥಾನದ ಭಕ್ತರು ಮತ್ತು ಸ್ಥಳೀಯರು ಹಲವು ಬಾರಿ ನಗರಸಭೆಯ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾರ್ಕೆಟ್‌ನಲ್ಲಿ ಸಮರ್ಪಕ ಸ್ವಚ್ಛತೆ ಹಾಗೂ ಭದ್ರತಾ ವ್ಯವಸ್ಥೆಯ ಕೊರತೆಯೂ ಇದೆ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂತೆ ಮಾರ್ಕೆಟ್‌ಗೆ ಬಲಿಷ್ಠ ಕಾಂಪೌಂಡ್ ಅಥವಾ ಫೆನ್ಸಿಂಗ್ ಅಳವಡಿಸುವುದು, ಸಿಸಿ ಕ್ಯಾಮೆರಾಗಳನ್ನು ಸ್ಥಾಪಿಸುವುದು, ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವುದು ಹಾಗೂ ಆದಿತ್ಯವಾರವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಮಾರ್ಕೆಟ್ ಅನ್ನು ಸಾರ್ವಜನಿಕರ ಅನಗತ್ಯ ಪ್ರವೇಶಕ್ಕೆ ಬಂದ್ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಜೊತೆಗೆ ಮಾರ್ಕೆಟ್ ನಿರ್ವಹಣಾ ಅಧಿಕಾರಿಗಳು ಸ್ವಚ್ಛತೆ, ಭದ್ರತೆ ಮತ್ತು ಅಸಾಮಾಜಿಕ ಚಟುವಟಿಕೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದೇವಸ್ಥಾನದ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಿ, ಅಸಾಮಾಜಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಮಾಜ ಸೇವಕ ಸತೀಶ್ ಪೂಜಾರಿ ಕೀಳಂಜೆ ಅವರ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ಭಕ್ತರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರಾಮ ಪೂಜಾರಿ (ಸಂತೆಕಟ್ಟೆ), ಅರುಣ್ ಪೂಜಾರಿ (ಸಂತೆಕಟ್ಟೆ), ಶಶಿಧರ್ ಮೊಗವೀರ ಸೇರಿದಂತೆ ಶ್ರೀ ವೀರಭದ್ರ ದೇವಸ್ಥಾನದ ಭಕ್ತಾಭಿಮಾನಿಗಳು ಕೂಡ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದ್ದಾರೆ.

