ಬಸ್ಸುಗಳ ನಡುವೆ ಪೈಪೋಟಿ : ಡಿಕ್ಕಿ ಹೊಡೆಸಿ ಜೀವ ಬೆದರಿಕೆ ಹಾಕಿದ ಚಾಲಕ

0
83

ಉಡುಪಿ : ನಗರದ ಹಳೆ ಬಸ್ ನಿಲ್ದಾಣದಲ್ಲಿ ಸಮಯದ ವಿಚಾರವಾಗಿ ಖಾಸಗಿ ಬಸ್ಸುಗಳ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಒಂದು ಬಸ್ಸಿಗೆ ಮತ್ತೊಂದು ಬಸ್‌ನಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ಸುಮಾರು 1.5 ಲಕ್ಷ ರೂ. ನಷ್ಟ ಉಂಟುಮಾಡಿರುವ ಹಾಗೂ ಜೀವ ಬೆದರಿಕೆ ಹಾಕಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆ ನಿವಾಸಿ ವೈಭವ್‌ ಪೈ ಎಂಬವರು KA-19-D-8000 ನಂಬರಿನ ಬಸ್ಸಿನ ಚಾಲಕರಾಗಿದ್ದು, ಶನಿವಾರ ರಾತ್ರಿ 9.15 ಗಂಟೆಗೆ ಉಡುಪಿಯಿಂದ ಕೆಮ್ಮಣ್ಣು ಹೂಡೆಗೆ ಹೊರಡಲು ಸಜ್ಜಾಗಿ ಬಸ್ಸನ್ನು ನಿಲ್ಲಿಸಿದ್ದರು. ಈ ವೇಳೆ ಅವರ ಬಸ್ಸಿನ ಮುಂದೆ KA-19-C-6852 ನಂಬರಿನ ಬಸ್ಸು ನಿಂತಿತ್ತು. ಬಸ್ಸು ರಾತ್ರಿ 8.53ಕ್ಕೆ ಹೊರಡಬೇಕಾಗಿದ್ದರೂ, 9ಗಂಟೆಯಾದರೂ ಹೊರಡದಿದ್ದಾಗ KA-19-D-8000 ಬಸ್ಸಿನ ಕಂಡಕ್ಟರ್ ಕಾರಣ ಕೇಳಿದ್ದಾರೆ. ಇದಕ್ಕೆ ಎದುರು ಬಸ್ಸಿನ ಸಿಬ್ಬಂದಿ, “ಬಸ್ಸು ರಿಪೇರಿಯಾಗಿದ್ದು ಸ್ಟಾರ್ಟ್ ಆಗುತ್ತಿಲ್ಲ, ಹೂಡೆಗೆ ಹೋಗುವುದಿಲ್ಲ” ಎಂದು ತಿಳಿಸಿದ್ದಾರೆ.

ಇದರಿಂದಾಗಿ ಚಾಲಕ ವೈಭವ್ ಪೈ ಅವರು ತಮ್ಮ ಬಸ್ಸನ್ನು ಮುಂದೆ ಚಲಾಯಿಸಿ ನಿಲ್ಲಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ KA-19-C-6852 ಬಸ್ಸಿನ ಚಾಲಕ ಸಲ್ಮಾನ್ ಎಂಬಾತನು, ವೈಭವ್ ಅವರ ಬಸ್ಸು ಮುಂದಕ್ಕೆ ಹೋಗದಂತೆ ತಡೆಯುವ ದುರುದ್ದೇಶದಿಂದ ತನ್ನ ಬಸ್ಸನ್ನು ಎಡಬದಿಗೆ ಎರಡು ಬಾರಿ ಜೋರಾಗಿ ಡಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿಗೆ ಸುಮಾರು 1,50,000 ರೂ.ಗಳಷ್ಟು ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎದುರು ಬಸ್ಸಿನ ಕಂಡಕ್ಟರ್ ರೋಷನ್‌ ಹಾಗೂ ಅವರೊಂದಿಗೆ ಇದ್ದ ಶಾರುಖ್‌, ಅಫ್ರೋಜ್ ಮತ್ತು ನವಾಜ್ ಎಂಬುವವರು ಸೇರಿಕೊಂಡು ಪೈ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. “ನಿಮ್ಮ ಬಸ್ಸಿಗೆ ಪುನಃ ಡಿಕ್ಕಿ ಹೊಡೆಯುತ್ತೇವೆ” ಎಂದು ಹೆದರಿಸಿದ್ದಲ್ಲದೆ, ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಚಾಲಕ ವೈಭವ್ ಪೈ ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here