ಮೂಡುಬಿದಿರೆ : ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯ ಹಿರಿಯ ಕನ್ನಡ ಅಧ್ಯಾಪಕ ಡಾ. ರಾಮಕೃಷ್ಣ ಶಿರೂರು ಅವರು ಪ್ರತಿಷ್ಠಿತ ‘ನಾಡೋಜ ಡಾ.ಕೈಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ ಎಂದು ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.
ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಷ್ಟೇ ಅಲ್ಲದೆ, ‘ಸಾಹಿತ್ಯ ಸೌರಭ’ ಮತ್ತು ‘ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನ’ದ ಮೂಲಕ ನೂರಾರು ಸಾಹಿತ್ಯಿಕ, ನೃತ್ಯ, ಯಕ್ಷಗಾನ ಹಾಗೂ ಗಾಯನ ತರಬೇತಿ ಕಾರ್ಯಕ್ರಮಗಳನ್ನು ಇವರು ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ.
ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶಿಕ್ಷಕ ಸಂಘಟನಾ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ. 2026ರ ಜುಲೈ 26 ರಂದು ನಡೆಯಲಿರುವ ಕಾಸರಗೋಡು ಕನ್ನಡ ಭವನದ ರಜತೋತ್ಸವ ಹಾಗೂ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಧಕ ಡಾ. ಶಿರೂರು ಅವರಿಗೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಪಿ.ಎಂ. ವೆಂಕಟರಮಣ ಹೊಳ್ಳ ಅಭಿನಂದನೆ ಸಲ್ಲಿಸಿದ್ದಾರೆ.

