ನವದೆಹಲಿ : 5 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ (ಬೆರಳಚ್ಚು ಹಾಗೂ ಕಣ್ಣಿನ ಸ್ಕ್ಯಾನ್) ನವೀಕರಣವನ್ನು ಉಚಿತವಾಗಿ ಮಾಡಿಸಿಕೊಳ್ಳಲು 2026ರ ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ ಎಂದು ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ತಿಳಿಸಿದೆ.
ಯುಐಡಿಎಐ ನಿಯಮಾವಳಿಗಳ ಪ್ರಕಾರ, ಮಕ್ಕಳ ಬೆಳವಣಿಗೆಯೊಂದಿಗೆ ಅವರ ಬಯೋಮೆಟ್ರಿಕ್ ಮಾಹಿತಿಯಲ್ಲಿ ಬದಲಾವಣೆ ಆಗುವ ಕಾರಣ 5 ವರ್ಷ ಹಾಗೂ 15 ವರ್ಷದ ನಂತರ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ಹಿಂದೆ ಈ ಸೇವೆಗೆ ನಿಗದಿತ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಇದೀಗ ಸೆಪ್ಟೆಂಬರ್ 30ರವರೆಗೆ ಉಚಿತವಾಗಿ ನವೀಕರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಪೋಷಕರು ತಮ್ಮ ಮಕ್ಕಳನ್ನು ಹತ್ತಿರದ ಆಧಾರ್ ನೋಂದಣಿ ಅಥವಾ ನವೀಕರಣ ಕೇಂದ್ರಕ್ಕೆ ಕರೆದೊಯ್ದು ಈ ಸೇವೆಯನ್ನು ಪಡೆಯಬಹುದು.
ಬಯೋಮೆಟ್ರಿಕ್ ನವೀಕರಣಕ್ಕೆ ಸಾಮಾನ್ಯವಾಗಿ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ. ಮಗುವಿನ ಹಳೆಯ ಆಧಾರ್ ಕಾರ್ಡ್ ಇದ್ದರೆ ಸಾಕಾಗುತ್ತದೆ. ಅಗತ್ಯವಿದ್ದಲ್ಲಿ ಪೋಷಕರ ಆಧಾರ್ ಕಾರ್ಡ್ ಹಾಗೂ ಮಗುವಿನ ಜನನ ಪ್ರಮಾಣ ಪತ್ರವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ಸೂಕ್ತ.
ನವೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹೊಸ ಮಾಹಿತಿಯು ಸಾಮಾನ್ಯವಾಗಿ 7 ರಿಂದ 30 ದಿನಗಳೊಳಗೆ ಆಧಾರ್ ವ್ಯವಸ್ಥೆಯಲ್ಲಿ ನವೀಕರಣಗೊಳ್ಳುತ್ತದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಬರುತ್ತದೆ. ಬಳಿಕ myAadhaar ಪೋರ್ಟಲ್ ಮೂಲಕ ಇ-ಆಧಾರ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಯುಐಡಿಎಐ ಮಕ್ಕಳ ಪೋಷಕರು ಕೊನೆಯ ಕ್ಷಣದವರೆಗೆ ಕಾಯದೆ ನಿಗದಿತ ಅವಧಿಯೊಳಗೆ ಬಯೋಮೆಟ್ರಿಕ್ ನವೀಕರಣ ಮಾಡಿಸಿಕೊಳ್ಳುವಂತೆ ಮನವಿ ಮಾಡಿದೆ.

