ಕಟೀಲ್ : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ವಿವಿಧ ವಲಯ ಸಂಚಾಲಕರ ಸಭೆಯು ಕಟೀಲ್‌ನ ತುಳುವರ್ಲ್ಡ್ ಫೌಂಡೇಶನ್ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ವಹಿಸಿದರು. ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕೇಂದ್ರೀಯ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ ಅವರು ನೂತನವಾಗಿ ನೇಮಕಗೊಂಡ ವಲಯ ಸಂಚಾಲಕರನ್ನು ಅಭಿನಂದಿಸಿ, ತುಳುವ ಮಹಾಸಭೆಯ ಶತಮಾನೋತ್ಸವದ ಯಶಸ್ಸಿಗೆ ಸಂಘಟಿತವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ಡಾ. ರಾಜೇಶ್ ಕೃಷ್ಣ ಆಳ್ವ ಅವರು 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ತುಳುವ ಮಹಾಸಭೆಯ ಇತಿಹಾಸ, ಧ್ಯೇಯ, ಉದ್ದೇಶಗಳು ಹಾಗೂ ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವ ಕಾರ್ಯಯೋಜನೆಗಳ ಕುರಿತು ವಿವರಿಸಿದರು. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು.
ತುಳುವ ಮಹಾಸಭೆ ಇಂಟರ್ನ್ಯಾಷನಲ್ ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಾಡ ಹಾಗೂ ತುಳುವರ್ಲ್ಡ್ ಫೌಂಡೇಶನ್ ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ ಕಾರ್ಯಕ್ರಮ ನಿರ್ವಹಿಸಿದರು. ತುಳುವರ್ಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು ಸ್ವಾಗತಿಸಿ, ತುಳುವ ಮಹಾಸಭೆ ಇಂಟರ್ನ್ಯಾಷನಲ್ ಪ್ರಧಾನ ಸಂಚಾಲಕ ವಿಶ್ವನಾಥ ಆಚಾರ್ಯ ಪೆರ್ಡೂರು ಧನ್ಯವಾದ ಸಲ್ಲಿಸಿದರು.
ಸಭೆಯಲ್ಲಿ ಕಾಪು ವಲಯ ಸಂಚಾಲಕ ಡಾ. ನಿರಂಜನ್ ಶೆಟ್ಟಿ, ಕುಂದಾಪುರ ವಲಯ ಸಂಚಾಲಕಿ ವಕೀಲೆ ಶರ್ಮಿಳಾ ಯೋಗೇಶ್ ಆಚಾರ್ಯ, ಮುಲ್ಕಿ ವಲಯ ಸಂಚಾಲಕ ಮಹೇಶ್ ಮುಲ್ಕಿ, ಪುತ್ತೂರು ವಲಯ ಸಂಚಾಲಕ ಮನೋಹರ ರೈ, ಹೆಬ್ರಿ ವಲಯ ಸಂಚಾಲಕ ರಕ್ಷಿತ್ ಹಾಗೂ ಕಾರ್ಕಳ ವಲಯ ಸಂಚಾಲಕ ಬಾಲಕೃಷ್ಣ ಕೆ. ಉಪಸ್ಥಿತರಿದ್ದರು.
ಸಭೆಯಲ್ಲಿ ವಿದೇಶಗಳಲ್ಲಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಘಟಕಗಳನ್ನು ಸ್ಥಾಪಿಸುವುದು, ಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

