ಕೌಶಲ್ಯದಿಂದ ಬದುಕು ಹಸನು : ರುಡ್‌ಸೆಟ್ ತರಬೇತಿ ಉದ್ಘಾಟನೆಯಲ್ಲಿ ಶಿವರಾಮ್ ಎಂ. ಬಾಬು ಕರೆ

0
8

ಬ್ರಹ್ಮಾವರ : ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ (ರುಡ್‌ಸೆಟ್), ಬ್ರಹ್ಮಾವರ ವತಿಯಿಂದ ಆಯೋಜಿಸಲಾದ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಎಂ. ಬಾಬು, ಐಎಫ್‌ಎಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಇಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿರುವ ಕ್ಷೇತ್ರಗಳಾಗಿದ್ದು, ಆಸಕ್ತಿಯಿಂದ ತರಬೇತಿ ಪಡೆದು ಅದನ್ನು ಜೀವನೋಪಾಯವನ್ನಾಗಿ ರೂಪಿಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.

“ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕೌಶಲ್ಯವನ್ನು ಸಂಪಾದಿಸಿ ಪಕ್ವತೆ ಹೊಂದುವುದು ಅತ್ಯಗತ್ಯ. ನಾವು ಬಯಸಿದ ಉದ್ಯೋಗ ದೊರೆಯದಿದ್ದರೂ, ನಮ್ಮಲ್ಲಿರುವ ಕೌಶಲ್ಯದಿಂದ ಸ್ವಂತ ಬದುಕನ್ನು ಕಟ್ಟಿಕೊಳ್ಳಬಹುದು. ಆದ್ದರಿಂದ ಕೌಶಲ್ಯವೇ ಬದುಕನ್ನು ಹಸನಾಗಿಸುತ್ತದೆ. ಈ ಒಂದು ತಿಂಗಳ ತರಬೇತಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಿ ಬೆಳೆಯಿರಿ” ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಮಾತನಾಡಿ, ತರಬೇತಿಯನ್ನು ಶ್ರದ್ಧೆಯಿಂದ ಕಲಿಯಬೇಕು. ಕಲಿತ ಕೌಶಲ್ಯ ಜೀವನಪರ್ಯಂತ ನೆರವಾಗುತ್ತದೆ. ತರಬೇತಿ ಮೂಲಕ ಪಡೆದ ಅನುಭವವನ್ನು ಇತರರೊಂದಿಗೆ ಹಂಚಿಕೊಂಡು ಗ್ರಾಮೀಣ ಯುವಕರು ಹಾಗೂ ಮಹಿಳೆಯರನ್ನು ಸ್ವ ಉದ್ಯೋಗದತ್ತ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಚೈತ್ರ ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕರ ಸಹಾಯಕ ಸಂತೋಷ್ ವಂದನಾರ್ಪಣೆ ಸಲ್ಲಿಸಿದರು. ತರಬೇತಿಯಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here