–ಮಂದಾರ ರಾಜೇಶ್ ಭಟ್
ಮೂಡಬಿದಿರೆಯಲ್ಲಿ ತುಳು ಕೂಟ ಬೆದ್ರದ ಸಂಯೋಜನೆಯಲ್ಲಿ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಿದ ಸಂಭ್ರಮದ ನಿಮಿತ್ತ ‘ಮಾನಾದಿಗೆದ ಮಿನದನ’ ಎಂಬ ಹೆಸರಿನಲ್ಲಿ ಸಮಾರಂಭವು ವಿಜೃಂಭಣೆಯಿಂದ ಜರುಗಿತು.
ತುಳು ಕೂಟ ಬೆದ್ರದ ಅಧ್ಯಕ್ಷೆ ಜಯಂತಿ ಬಂಗೇರ ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಎ. ಸಿ. ಭಂಡಾರಿ ಅವರು ಗೌರವ ಉಪಸ್ಥಿತರಿದ್ದರು . ತುಳು ಕೂಟ ಬೆದ್ರದ ಗೌರವಾಧ್ಯಕ್ಷರಾದ ಬಾಹುಬಲಿ ಪ್ರಸಾದ್, ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ, ಸ್ಥಾಪಕ ಅಧ್ಯಕ್ಷರಾದ ಚಂದ್ರಹಾಸ ದೇವಾಡಿಗ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜನೆ ಹಾಗೂ ನಿರೂಪಣೆಯನ್ನು ಚೇತನ ರಾಜೇಂದ್ರ ಹೆಗ್ಡೆ ನೆರವೇರಿಸಿದರೆ, ಸಭಾ ಕಾರ್ಯಕ್ರಮದ ವಂದನಾರ್ಪಣೆಯನ್ನು ಚಂದ್ರಹಾಸ ದೇವಾಡಿಗ ಅವರು ಮಾಡಿದರು.
ಸಮಾರಂಭದಲ್ಲಿ ತುಳು ಮತ್ತು ಕನ್ನಡ ಭಾಷೆಗಳೆರಡನ್ನೂ ಸೇರಿ ರಾಷ್ಟ್ರದ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ ಆಳ್ವ ಅವರಿಗೆ ವಿಶೇಷ ಸನ್ಮಾನವನ್ನು ನೆರವೇರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮೋಹನ ಆಳ್ವ ಅವರು, ಈ ಸನ್ಮಾನವನ್ನು ವಿನೀತನಾಗಿ ಸ್ವೀಕರಿಸಿರುವುದಾಗಿ ತಿಳಿಸಿ, ರಾಜ್ಯ ಭಾಷೆಯನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ ವರದಿ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ವರದಿಯನ್ನು ಸಲ್ಲಿಸಲಾಗಿತ್ತು ಮತ್ತು ಈಗ ಅದು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆಯಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ನಮಸ್ಕರಿಸುವುದಾಗಿ ನುಡಿದರು. ಪಂಚ ದ್ರಾವಿಡ ಭಾಷೆಗಳಲ್ಲಿ ತುಳುವಿಗೆ ತನ್ನದೇ ಆದ ಮೌಲ್ಯ ಹಾಗೂ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಜಗತ್ತಿನ ಅನೇಕ ಕಡೆ ಉಲ್ಲೇಖವಾಗಿದೆ ಎಂದ ಅವರು, ತುಳುನಾಡಿನ ಹಾಗೂ ಜಗತ್ತಿನಲ್ಲೆಡೆ ನೆಲೆಸಿದ ಜಾತಿ ಬಾಂಧವರು ತುಳು ಭಾಷೆಯನ್ನು ಮಾತೃಭಾಷೆಯಾಗಿ ಅಥವಾ ವ್ಯವಹಾರಿಕವಾಗಿ ಬಳಸುತ್ತಿದ್ದು, ತುಳು ಭಾಷೆಯ ಸಂರಕ್ಷಣೆಯಲ್ಲಿ ಶತಮಾನಗಳ ಹಿಂದಿನಿಂದಲೂ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷರಾದ ಎ. ಸಿ. ಭಂಡಾರಿ ಅವರು, ಶಿಕ್ಷಣ ತಜ್ಞ ಹಾಗೂ ಸಾಂಸ್ಕೃತಿಕ ನೇತಾರರಾದ ಡಾ. ಮೋಹನ ಆಳ್ವ ಅವರನ್ನು ಸನ್ಮಾನಿಸುವ ಅವಕಾಶ ದೊರಕಿರುವುದು ಅತೀವ ಸಂತೋಷ ತಂದಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ತುಳು ಭಾಷೆ ಸಂರಕ್ಷಣೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಪಾತ್ರ ದೊಡ್ಡದಾಗಿದ್ದು, ಅವರನ್ನು ಕೂಡ ಈ ಸಂದರ್ಭದಲ್ಲಿ ಸ್ಮರಿಸಿ ಗುರುತಿಸುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

