ಮಂಗಳೂರು : ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ, ಯಕ್ಷಗಾನ ಮತ್ತು ವಿವಿಧ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ವಕ್ವಾಡಿ ಶೇಖರ ಶೆಟ್ಟಿ (86) ಇಂದು ಮುಂಜಾನೆ ನಿಧನರಾದರು. ಕದ್ರಿಯ ಶ್ರೀಕೃಷ್ಣ ಯಕ್ಷ ಸಭಾ ಮತ್ತು ಯಕ್ಷಾಂಗಣ ಮಂಗಳೂರು ಸಂಸ್ಥೆಗಳಲ್ಲಿ ಸುದೀರ್ಘ ಕಾಲ ಸದಸ್ಯರಾಗಿದ್ದು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ಸಾರ್ವಜನಿಕ ರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ಬ್ಯಾಂಕಿಂಗ್ ಮತ್ತು ಸಾಮಾಜಿಕ ಸೇವೆಗಾಗಿ ಹಲವು ಸನ್ಮಾನ – ಗೌರವಗಳಿಗೆ ಪಾತ್ರರಾಗಿದ್ದರು.
ಮೂಲತಃ ಕುಂದಾಪುರ ತಾಲೂಕಿನ ವಕ್ವಾಡಿಯ ಪ್ರತಿಷ್ಠಿತ ಕೃಷಿಕ ಕುಟುಂಬದಲ್ಲಿ ಜನಿಸಿದ ಶೇಖರ ಶೆಟ್ಟರು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನಲೆಸಿದ್ದರು. ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆ ಸಲ್ಲಿಸಿ, ತಮ್ಮ ಸ್ನೇಹಶೀಲ ಹಾಗೂ ವಿನೋದ ಭರಿತ ಮಾತುಗಳಿಂದ ಸಾರ್ವಜನಿಕರ ವಿಶ್ವಾಸ ಗಳಿಸಿದ್ದರು. ಪತ್ನಿ ವಸಂತಿ ಶೆಟ್ಟಿ, ಮೂವರು ಗಂಡು ಮಕ್ಕಳು ಡಾ| ವಿದ್ಯಾಧರ್ ಶೆಟ್ಟಿ, ರೂಪೇಶ್ ಕುಮಾರ್ ಶೆಟ್ಟಿ, ಹರ್ಷಿಷ್ ಕುಮಾರ್ ಶೆಟ್ಟಿ, ಕುಟುಂಬಿಕರು ಹಾಗೂ ಅಪಾರ ಬಂಧು – ಮಿತ್ರರನ್ನು ಅವರು ಅಗಲಿದ್ದಾರೆ.
ಕದ್ರಿ ಹಿಲ್ಸ್ ಪ್ರವಾಸೀ ಮಂದಿರದ ಮುಂಭಾಗದ ಸಂಗೀತಾ ಅಪಾರ್ಟ್ ಮೆಂಟ್ ನಲ್ಲಿರುವ ಅವರ ನಿವಾಸದಲ್ಲಿ ಅವರ ಆಪ್ತರು ಮತ್ತು ಹಿತೈಷಿಗಳು ಅಂತಿಮ ದರ್ಶನ ಪಡೆದರು. ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮೃತರ ದ್ವಿತೀಯ ಪುತ್ರ ಬರಬೇಕಾಗಿದ್ದು ಸಂಜೆ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆದಿವೆಯೆಂದು ಅವರ ಕಿರಿಯ ಪುತ್ರ ಹರ್ಷಿಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ವಕ್ವಾಡಿ ಶೇಖರ ಶೆಟ್ಟಿ ಅವರ ನಿಧನಕ್ಕೆ ಯಕ್ಷಾಂಗಣ ಮಂಗಳೂರು, ಶ್ರೀಕೃಷ್ಣ ಯಕ್ಷ ಸಭಾ ಕದ್ರಿ, ಕಲ್ಕೂರಾ ಪ್ರತಿಷ್ಠಾನ ಮಂಗಳೂರು, ವಿಜಯಾ ಬ್ಯಾಂಕಿನ ಸಹೋದ್ಯೋಗಿಗಳು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಬಂಟರ ಸಂಘಗಳು ಸಂತಾಪ ವ್ಯಕ್ತಪಡಿಸಿವೆ.
ಯಕ್ಷಾಂಗಣದ ನುಡಿನಮನ: ಆತ್ಮೀಯ ಬಳಗದಲ್ಲಿ ‘ಮೀಸೆ ಮಾವ’ ಎಂಬ ಅಕ್ಕರೆಗೆ ಪಾತ್ರರಾಗಿದ್ದ ವಕ್ವಾಡಿಯವರು ಯಕ್ಷಾಂಗಣದ ಸಪ್ತಾಹ ಕಾರ್ಯಕ್ರಮಗಳಲ್ಲಿ ಯುವಕರಂತೆ ಓಡಾಡಿ ಸಹಕಾರ ನೀಡುತ್ತಿದ್ದರೆಂದು ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ . 2024 ರಲ್ಲಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜರಗಿದ 11ನೇ ವರ್ಷದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ ‘ ದಲ್ಲಿ ಹಿರಿಯ ಸದಸ್ಯರ ನೆಲೆಯಲ್ಲಿ ಶೇಖರ ಶೆಟ್ಟಿಯವರನ್ನು ಸಪತ್ನಿಕರಾಗಿ ಸನ್ಮಾನಿಸಲಾಗಿದೆ. ಶೆಟ್ಟರ ನಿಧನದಿಂದ ಹಿರಿಯ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದವರು ನುಡಿನಮನ ಸಲ್ಲಿಸಿದ್ದಾರೆ.

