ಆನೇಕಲ್ : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿನಿಯನ್ನು ಮಧುಶ್ರೀ (14) ಎಂದು ಗುರುತಿಸಲಾಗಿದೆ.
ಮಧುಶ್ರೀ ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗುರುವಾರ ರಾತ್ರಿ ಡೆತ್‌ನೋಟ್ ಬರೆದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಆಕೆಯನ್ನು ಎಬ್ಬಿಸಲು ಹೋದ ಕುಟುಂಬದವರಿಗೆ ಘಟನೆ ಗೊತ್ತಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಾಲೆಯಲ್ಲಿ ಹಣ ಕಳವು ಮಾಡಿದ ಆರೋಪವನ್ನು ತನ್ನ ಮೇಲೆ ಹೊರಿಸಲಾಗಿದೆ ಎಂಬ ನೋವನ್ನು ಮಧುಶ್ರೀ ಅನುಭವಿಸುತ್ತಿದ್ದಳು. ₹20 ಹಾಗೂ ₹10 ಕಳವು ಮಾಡಿರುವ ಆರೋಪದಿಂದ ಶಿಕ್ಷಕರು ಬೈದಿದ್ದು ಮತ್ತು ಶಾಲೆಯಲ್ಲಿ ತನಗೆ ಅವಮಾನವಾಗಿದೆ ಎಂದು ಆಕೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಡೆತ್‌ನೋಟ್‌ನಲ್ಲಿ, “ಅಮ್ಮ ನನ್ನನ್ನು ಕ್ಷಮಿಸು. ಈ ಭೂಮಿ ಮೇಲೆ ಬದುಕುವ ಅರ್ಹತೆ ನನಗಿಲ್ಲ. ಶಾಲೆಯಲ್ಲಿ ನಡೆದ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಇದರಲ್ಲಿ ನನ್ನ ಅಮ್ಮ, ಅಕ್ಕ, ತಂಗಿ, ತಮ್ಮ ಯಾರ ತಪ್ಪೂ ಇಲ್ಲ. ಎಲ್ಲರೂ ನನ್ನನ್ನು ಕ್ಷಮಿಸಿ” ಎಂದು ಬರೆದಿದ್ದಾಳೆ ಎನ್ನಲಾಗಿದೆ.
ಇದೇ ವೇಳೆ, ತನ್ನ ತಮ್ಮ, ತಂಗಿ ಹಾಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡಿರುವ ವಿದ್ಯಾರ್ಥಿನಿ, ಕುಟುಂಬದವರಿಗೆ ಕೊನೆಯ ಸಂದೇಶವನ್ನೂ ಬರೆದಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‌ನೋಟ್ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

